ಮತ್ತೆ ಇಣುಕುತ್ತಿದೆ ಅಕ್ರಮ-ಸಕ್ರಮದ ಭೂತ

ಅಕ್ರಮ ಸಕ್ರಮ ಯೋಜನೆ ಜಾರಿ ಕುರಿತು ಸುಳಿವು ನೀಡಿರುವ ಬೆಂಗಳೂರು ಉಸ್ತುವಾರಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಅಕ್ರಮ ಸಕ್ರಮ ವಿಧೇಯಕವನ್ನು ಹೊಸ ರೂಪದಲ್ಲಿ ಮಂಡಿಸಿ, ಅನುಮೋದನೆ ಪಡೆಯಲು ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ.
ಮುಂದಿನ ಬಜೆಟ್ ಅಧಿವೇಶನದಲ್ಲಿ ಅಕ್ರಮ ಸಕ್ರಮ ವಿಧೇಯಕವನ್ನು ತಿದ್ದುಪಡಿ ಮಾಡಿ ಸದನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಜನರಿಗೆ ಸಹಾಯಕವಾಗಲು ಕಾನೂನಿನ ಅನ್ವಯವೇ ಈ ಯೋಜನೆ ಜಾರಿಗೊಳಿಸಲಾವುದು ಎಂದು ಸಚಿವರು ಹೇಳಿದ್ದಾರೆ.
ರಾಜ್ಯಪಾಲರು ತಿರಸ್ಕರಿಸಿದ್ದರು : ಹಿಂದಿನ ಬಿಜೆಪಿ ಸರ್ಕಾರ ಅಕ್ರಮ ಸಕ್ರಮ ಕಾಯ್ದೆ ಕುರಿತ ವಿಧೇಯಕವನ್ನು ಸದನದಲ್ಲಿ ಮಂಡಿಸಿ, ಎರಡೂ ಸದನಗಳಿಂದ ಒಪ್ಪಿಗೆ ಪಡೆದಿತ್ತು. ಆದರೆ, ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ವಿಧೇಯಕವನ್ನು ತಿರಸ್ಕರಿಸಿದ್ದರು.
ಇದರಿಂದ ಪಾಠ ಕಲಿತಿರುವ ಕಾಂಗ್ರೆಸ್ ವಿಧೇಯಕದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ಮತ್ತೊಮ್ಮೆ ಮಂಡಿಸಿ, ರಾಜ್ಯಪಾಲರ ಒಪ್ಪಿಗೆ ಪಡೆದು, ಜಾರಿಗೆ ತರಲು ಯೋಜನೆ ರೂಪಿಸಿದೆ. ವಿಧೇಯಕ ಜಾರಿಗೆ ಕಾನೂನಿನ ಯಾವುದೇ ತೊಡಕು ಉಂಟಾಗದಂತೆ ಎಚ್ಚರ ವಹಿಸಿದೆ.
ಯಾರಿಗೆ ಉಪಯೋಗ : ಒಂದು ಹಂತದಲ್ಲಿ ಬೆಂಗಳೂರು ನಗರದಲ್ಲಿ ಅಕ್ರಮ ಸಕ್ರಮ ಯೋಜನೆ ಜಾರಿಯಾದರೆ, ಸುಮಾರು ಎಂಟು ಲಕ್ಷ ಕಟ್ಟಡ ಮತ್ತು ನಿವೇಶನಗಳು ಸಕ್ರಮಗೊಳ್ಳಲಿವೆ. ಇದರಿಂದಾಗಿ 5,000 ಕೋಟಿ ಆದಾಯ ರಾಜ್ಯ ಸರ್ಕಾರಕ್ಕೆ ಬರುವ ನಿರೀಕ್ಷೆ ಇದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 5,000 ಕೋಟಿ ಆದಾಯವನ್ನು ಅಕ್ರಮ ಸಕ್ರಮ ಯೋಜನೆ ಮೂಲಕ ಸಂಗ್ರಹಿಸಲು ಸರ್ಕಾರ ಉದ್ದೇಶಸಿದೆ. ಆದಾಯ ಸಂಗ್ರಹ ಮತ್ತು ಜನರಿಗೆ ನೆರವಾಗಲು ಈ ಯೋಜನೆಯನ್ನು ಜಾರಿಗಳಿಸಲು ಚಿಂತನೆ ನಡೆಸಿದೆ.(ಅಕ್ರಮ-ಸಕ್ರಮ ವಿಧೇಯಕ ಅಂದ್ರೇನು)
ದಂಡ ವಿಧಿಸಿ ಸಕ್ರಮ : ಅಕ್ರಮವಾರಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದರೆ ಶೇ 25ರಷ್ಟು ದಂಡ ಮತ್ತು ಹೊರ ಜಿಲ್ಲೆಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದರೆ ಶೇ 35ರಷ್ಟು ದಂಡ ವಿಧಿಸಲು ಸರ್ಕಾರ ಆಲೋಚಿಸಿದೆ.
ರಾಜ್ಯ ಸರ್ಕಾರ ಆದಾಯ ಹೆಚ್ಚಿಸಬೇಕು ಎಂದು ಹಿಂದಿನ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಸುರೇಶ್ ಕುಮಾರ್ ಅಕ್ರಮ ಸಕ್ರಮ ಯೋಜನೆಯನ್ನು ಸದನಸದಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದ್ದರು. ಆದರೆ, ರಾಜ್ಯಪಾಲರು ವಿಧೇಯಕ ತಿರಸ್ಕರಿಸಿದ ಕಾರಣ ಸರ್ಕಾರ ಅದನ್ನು ಹಿಂಪಡೆದಿತ್ತು.












Click it and Unblock the Notifications