ಬೀಭತ್ಸ ಮಳೆ: ನಾಲ್ವರು ಯೋಧರೇ ಕೊಚ್ಚಿ ಹೋದರು
ನವದೆಹಲಿ, ಜೂನ್ 18: ಉತ್ತರದಲ್ಲಿ ಬೀಭತ್ಸ ಮಳೆರಾಯ ನಾಲ್ವರು ಯೋಧರನ್ನು ಮತ್ತು ಇಬ್ಬರು ಸ್ಥಳೀಯ ಪೊಲೀಸರನ್ನು ಕೊಚ್ಚಿಕೊಂಡು ಹೋಗಿದ್ದಾನೆ.
ಹೌದು, ದುರ್ಗಮ ಪರಿಸ್ಥಿತಿಯಲ್ಲೂ ಧೀರೋದ್ದಾತವಾಗಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದ ಭಾರತ-ಟಿಬೆಟ್ ಗಡಿ ಪೊಲೀಸ್ ಪಡೆಯ ನಾಲ್ವರು ಮತ್ತು ಇಬ್ಬರು ಸ್ಥಳೀಯ ಪೊಲೀಸರು ಸಿಕ್ಕಿಂನಲ್ಲಿ ನೀರುಪಾಲಾಗಿದ್ದಾರೆ. ಬಾರ್ಡರ್ ರೋಡ್ ಆರ್ಗನೈಸೇಶನಿನ 12 ಕಿರಿಯ ಅಧಿಕಾರಿಗಳು ಸಹ ದಿಢೀರನೆ ನಾಪತ್ತೆಯಾಗಿದ್ದಾರೆ.

ಜಲಪ್ರಳಯದ ಬಳಿಕ ಎಲ್ಲೆಂದರಲ್ಲಿ ಭೂಸ್ಖಲನಗಳು ಉಂಟಾಗುತ್ತಿವೆ. ನಿನ್ನೆ ಕಾಣಿಸುತ್ತಿದ್ದ ರಸ್ತೆಗಳು, ಕಟ್ಟಡಗಳು, ದೇವಸ್ಥಾನಗಳು, ಪ್ರಾಣಿಗಳು, ಜನ ಇಂದು ಇಲ್ಲವಾಗಿದ್ದಾರೆ. ಉತ್ತರಾಕಾಂಡ ಅಂತಲೇ ಅಲ್ಲ; ಅಸ್ಸಾಂ ಮತ್ತು ಅರುಣಾಚಲ ಪ್ರದೇಶವೂ ಜಲಪ್ರವಾಹದಿಂದ ಬಸವಳಿದಿದೆ. ಒಟ್ಟು 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರ ಸಿಕ್ಕಿಂನ ದೂರ ಪ್ರದೇಶಗಳಲ್ಲಿ ಇನ್ನೂ 8 ಮಂದಿ ಕಾಣೆಯಾಗಿದ್ದಾರೆ.
ನಿನ್ನೆ ಸಂಜೆಯಿಂದ ಸೇನೆ ಮತ್ತು ಭಾರತೀಯ ವಾಯುಪಡೆ ರಕ್ಷಣಾ ಕಾರ್ಯಕ್ಕೆ ಇಳಿದಿದೆ. ಹಿಮಾಚಲ ಪ್ರದೇಶ ಸಿಎಂ ವೀರಭದ್ರ ಸಿಂಗ್ ಮುಂತಾದವರನ್ನು ಇಂದು ಬೆಳಗ್ಗೆ ಏರ್ ಲಿಫ್ಟ್ ಮಾಡಲಾಗಿದೆ.
ಈ ಮಧ್ಯೆ, ಸಿಯಾಚಿನ್ ಗಡಿ, ಗಂಗೋತ್ರಿ, ಕಾಶಿಯಾತ್ರೆ ಎಂದು ಪ್ರವಾಸಕ್ಕೆ ತೆರಳಿದ್ದ ಕರ್ನಾಟಕದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ರುದ್ರಪ್ರಯಾಗ್ ಜಿಲ್ಲೆಯಲ್ಲಿ ಬೆಟ್ಟದ ಮೇಲೆ ತಂಗಿರುವುದಾಗಿಯೂ, ಸದ್ಯಕ್ಕೆ ಸುರಕ್ಷಿತವಾಗಿರುವುದಾಗಿಯೂ ತಿಳಿಸಿದ್ದಾರೆ.
ವಾಯುಪಡೆಯು ಹೆಲಿಕಾಪ್ಟರುಗಳ ಮೂಲಕ 2.4 ಟನ್ ಆಹಾರ ಸಾಮಾಗ್ರಿಗಳನ್ನು ನಿರಾಶ್ರಿತರಿಗೆ ಸರಬರಾಜು ಮಾಡಿದೆ. 88 ವರ್ಷಗಳ ದಾಖಲೆಯನ್ನು ಸರಿಗಟ್ಟಿದೆ. ಜೂನ್ ತಿಂಗಳಲ್ಲಿ ಉದುವರೆಗೂ 22 ಸೆಂಮೀ ಮಳೆಯಾಗಿದೆ ಎಂದು ಡೆಹ್ರಾಡೂನ್ ಹವಾಮಾನ ಇಲಾಖೆ ತಿಳಿಸಿದೆ.
ಮಳೆ ಅವಾಂತರದ ತಾಜಾ ಸುದ್ದಿಯನ್ನು ಇಲ್ಲಿ ಆಗಾಗ UPDATE ಮಾಡಲಾಗುವುದು. ನಿರೀಕ್ಷಿಸಿ.












Click it and Unblock the Notifications