'ದರ ಏರಿಕೆ: ಬಸ್ ಸೇವೆ ಖಾಸಗೀಕರಣ ಮಾಡಿಬಿಡಿ'

ತಾಜಾ ಆಗಿ, ರಾಜ್ಯ ಸರಕಾರಿ ಸಾರಿಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಬಸ್ ಪ್ರಯಾಣ ದರ ಏರಿಸಿರುವುದರಿಂದ ಹಿಡಿದು ಸಿಎಂ ಸಿದ್ದು ಅವರ ಅನೇಕ ಜನಪ್ರಿಯ ಆದರೆ ಆತುರದ ನಿರ್ಧಾರಗಳ ಬಗ್ಗೆ ರೇವಣ್ಣ ಕಿಡಿಕಾರಿದ್ದಾರೆ.
ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಬಸ್ ಪ್ರಯಾಣ ದರವನ್ನು ದಿಢೀರನೆ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಅತ್ಲಾಗೆ ಬಸ್ ಸೇವೆಯನ್ನು ಖಾಸಗೀಕರಣ ಮಾಡಿಬಿಡಿ ಎಂದು ಸಿಎಂ ಸಿದ್ದುಗೆ ರೇವಣ್ಣ ಕಿವಿಮಾತು ಹೇಳಿದ್ದಾರೆ.
ಸಾರ್ವಜನಿಕ ಬಸ್ಸುಗಳನ್ನು ಈ ಪಾಟಿ ದುಬಾರಿ ದರದಲ್ಲಿ ಓಡಿಸುವ ಅಗತ್ಯವಿಲ್ಲ. 'ಲಾಭವೂ ಇಲ್ಲ - ನಷ್ಟವೂ ಇಲ್ಲ' ಎಂಬಂತೆ ಸಾರ್ವಜನಿಕ ಬಸ್ ಸೇವೆ ಒದಗಿಸಬೇಕು. ಆದರೆ ಪ್ರಯಾಣ ದರವನ್ನು ನಿಯಂತ್ರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಮುಖ್ಯಮಂತ್ರಿಗಳು ಸರಕಾರಿ ಬಸ್ ಸಂಸ್ಥೆಗಳನ್ನು ಖಾಸಗಿಯವರ ಕೈಗೆ ಒಪ್ಪಿಸಿ, ಕೈತೊಳೆದುಕೊಳ್ಳುವುದು ಒಳಿತು ಎಂದು ರೇವಣ್ಣ ಹೇಳಿದ್ದಾರೆ.
ಬಸ್ ದರ ಏರಿಕೆಯಿಂದ ಮಧ್ಯಮ ವರ್ಗ ಮತ್ತು ಬಡ ಕುಟುಂಬಸ್ಥರ ಮೇಲೆ ಭಾರಿ ಹೊರೆ ಬೀಳಲಿದೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬಸ್ ದರ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಸಿಎಂ ಸಿದ್ದುಗೆ ರೇವಣ್ಣ ಆಗ್ರಹಿಸಿದ್ದಾರೆ.
ಸಿದ್ದುದೆಲ್ಲಾ ದುಡುಕಿನ ನಿರ್ಧಾರಗಳೇ:
ಇನ್ನು, ಹಾಲಿನ ಪ್ರೋತ್ಸಾಹ ಧನವನ್ನು 2 ರೂ ನಿಂದ 4 ರೂ. ಗೆ ಏರಿಸುವ ಘೋಷಣೆಯಾಗಿ ಒಂದು ತಿಂಗಳಾದರೂ ಹಾಲು ಉತ್ಪಾದಕರ ಕೈಗೆ ಹಣ ಇನ್ನೂ ಸೇರಿಲ್ಲ. ಸಿದ್ದರಾಮಯ್ಯನವರದು ಎಲ್ಲಾ ಆತುರದ ನಿರ್ಧಾರಗಳು ಎಂದು ರೇವಣ್ಣ ಲೇವಡಿ ಮಾಡಿದರು.
ಬಿಪಿಎಲ್ ಕಾರ್ಡುದಾರರಿಗೆ 'ರೂಪಾಯಿ ಅಕ್ಕಿ' ವಿತರಣೆ ಯೋಜನೆ ಜಾರಿಯಲ್ಲೂ ಸಿಎಂ ಸಿದ್ದು ಫಜೀತಿ ಮಾಡಿಕೊಂಡಿದ್ದಾರೆ. ಒಬ್ಬರಿಗೆ ಸಹಾಯ ಮಾಡಲು ಹೋಗಿ ಬೇರೊಬ್ಬರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ರೇವಣ್ಣ ಖಂಡತುಂಡವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆತುರದ ನಿರ್ಧಾರಗಳನ್ನು ಟೀಕಿಸಿದ್ದಾರೆ.












Click it and Unblock the Notifications