ನೂತನವಾಗಿ 18 ನಗರಗಳಲ್ಲಿ ಓಡಲಿವೆ ಸಿಟಿ ಬಸ್!

ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ರಾಮಲಿಂಗಾರೆಡ್ಡಿ, ಪ್ರಸಕ್ತ ಸಾಲಿನಲ್ಲಿ ಕೆಎಸ್‌ಆರ್ ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್ ಟಿಸಿ ವ್ಯಾಪ್ತಿಯಲ್ಲಿ 18 ನಗರ ಮತ್ತು ಪಟ್ಟಣಗಳಲ್ಲಿ ಬಸ್ ಸೇವೆ ಕಲ್ಪಿಸಲು ಸರ್ಕಾರ ಯೋಜನೆ ತಯಾರಿಸುತ್ತಿದೆ ಎಂದರು.
ಈ ವರ್ಷ ಕೇಂದ್ರ ಸರ್ಕಾರ ಜೆಎನ್ ನರ್ಮ್ ಯೋಜನೆ ಅನ್ವಯ ರಾಜ್ಯ ಸರ್ಕಾರ ಹೊಸ ಬಸ್ ಗಳನ್ನು ಖರೀದಿಸಲಿದೆ. ಇದರ ಮೂಲಕ ರಾಜ್ಯದ 18 ನಗರ ಮತ್ತು ಪಟ್ಟಣದಲ್ಲಿ ನಗರ ಸಾರಿಗೆ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು.
ಎಲ್ಲಿ ಓಡಲಿವೆ ಬಸ್ : ಎನ್‌ಡಬ್ಲ್ಯುಕೆಆರ್ ಟಿಸಿ ವ್ಯಾಪ್ತಿಯಲ್ಲಿನ ಹುಬ್ಬಳ್ಳಿ - ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಗದಗ, ರಾಣೆಬೆನ್ನೂರು, ಕಾರವಾರ, ಶಿರಸಿ ಮುಂತಾದ ನಗರಗಳಲ್ಲಿ ನೂತನ ಬಸ್ ಸೇವೆ ಒದಗಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ರಾಜ್ಯದ 18 ನಗರಗಳಲ್ಲಿ ಈಗಾಗಲೇ ನಗರ ಸಾರಿಗೆ ಬಸ್ ಸೇವೆ ಪ್ರಾರಂಭವಾಗಿದೆ. ಇಂತಹ ನಗರಗಳಿಗೆ ಹೆಚ್ಚುವರಿಯಾಗಿ ನೂತನ ಬಸ್ ಗಳನ್ನು ನೀಡಲಾಗುವುದು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.
ಗ್ರಾಮೀಣ ಸಾರಿಗೆಗೆ ಬಲ : ರಾಜ್ಯದ ಗ್ರಾಮೀಣ ಸಾರಿಗೆಗಳನ್ನು ಬಲಪಡಿಸಲು ಯೋಜನೆ ರೂಪಿಸಲಾಗಿದೆ. 700 ಬಸ್ ಗಳನ್ನು ಗ್ರಾಮೀಣ ಸಾರಿಗೆಗಾಗಿ ನೀಡಲಾಗುವುದು. ರಾಜ್ಯದ ಹತ್ತು ಗ್ರಾಮಗಳಲ್ಲಿ ನೂತನವಾಗಿ ಸಾರಿಗೆ ವ್ಯವಸ್ಥೆ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದರು.
ಕೇಂದ್ರಕ್ಕೆ ಮೊರೆ : ಪ್ರಯಾಣದರ ಹೆಚ್ಚು ಮಾಡಿದರೂ ರಾಜ್ಯ ಸಾರಿಗೆ ಸಂಸ್ಥೆಯ ನಷ್ಟ ಅನುಭವಿಸುತ್ತಿದೆ. ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಇಲಾಖೆ ಕೇಂದ್ರ ಸರ್ಕಾರದ ನೆರವು ಪಡೆಯಬೇಕಾಗಿದೆ ಎಂದು ಹೇಳಿದರು.
ಕೇವಲ ಪ್ರಯಾಣ ದರ ಹೆಚ್ಚಳದಿಂದಲೇ ನಿಗಮದ ಆರ್ಥಿಕ ಬಗೆಹರಿಯುವುದಿಲ್ಲ. ಆದ್ದರಿಂದ ಯಾವುದಾದರೂ ಯೋಜನೆ ಅಡಿ ನಿಗಮಕ್ಕೆ ಸಬ್ಸಿಡಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications