ಬೆಂಗಳೂರು : ಎಟಿಎಂ ಯಂತ್ರವನ್ನೇ ಕದ್ದ ಕಳ್ಳರು!

ಬೆಂಗಳೂರು ಉತ್ತರ ತಾಲೂಕಿನ ದ್ವಾರಕಾನಗರದಲ್ಲಿ ಸೋಮವಾರ ರಾತ್ರಿ 1 ಗಂಟೆ ಸುಮಾರಿಗೆ ಕಳ್ಳರು, ಎಟಿಎಂ ಯಂತ್ರ ಕದ್ದಿದ್ದು, ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. 5 ಲಕ್ಷಕ್ಕೂ ಅಧಿಕ ಹಣ ಎಟಿಎಂನಲ್ಲಿತ್ತು ಎಂದು ಎಸ್ ಬಿಐ ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಎಟಿಎಂ ಕೇಂದ್ರ ಸ್ಥಾಪನೆಯಾಗಿ ಒಂದು ತಿಂಗಳು ಕಳೆದಿರಲಿಲ್ಲ. ಆದ್ದರಿಂದ ರಾತ್ರಿ ಪಾಳಯಕ್ಕೆ ಯಾವುದೇ ಭದ್ರತಾ ಸಿಬ್ಬಂದಿ ನೇಮಿಸಿರಲಿಲ್ಲ. ಇದನ್ನು ಗಮನಿಸಿ, ಯೋಜನೆ ರೂಪಿಸಿದ ಕಳ್ಳರು, ಎಟಿಎಂ ಯಂತ್ರವನ್ನೆ ಹೊತ್ತಿದ್ದಾರೆ. (ಕೆನರಾ ಬ್ಯಾಂಕ್ ಎಟಿಎಂನಿಂದ 20 ಲಕ್ಷ ಕಳವು)
ಘಟನೆಯ ವಿವರ : ತಡರಾತ್ರಿ ಸುಮಾರು 1 ಗಂಟೆಗೆ ಐದು ಜನರು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಎಟಿಎಂವೊಳಗೆ ಆಗಮಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ. ತಕ್ಷಣ ಅವರು, ಸಿಸಿಟಿವಿ ಸಂಪರ್ಕವನ್ನು ಸ್ಥಗಿತಗೊಳಸಿದ್ದಾರೆ.
ಕೇವಲ ಏಳು ನಿಮಿಷಗಳ ಅವಧಿಯಲ್ಲಿ ಯಂತ್ರವನ್ನು ಟಾಟಾಸುಮೋ ವಾಹನದಲ್ಲಿ ಇಟ್ಟುಕೊಂಡು ಪರಾರಿಯಾಗಿರುವುದು ರಸ್ತೆಯ ಸಿಸಿಟಿಯಲ್ಲಿ ಸೆರೆಯಾಗಿದೆ. ವಾಹನದ ನಂಬರ್ ಮುಂತಾದ ಮಾಹಿತಿಗಳು ಸೆರೆಯಾಗಿರಬಹದು ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಒಟ್ಟು ಏಳು ಜನರ ತಂಡ ಈ ಕೃತ್ಯ ನಡೆಸಿದ್ದು, ಐವರು ಎಟಿಎಂ ಕೇಂದ್ರದೊಳಕ್ಕೆ ಹೋಗಿದ್ದರೆ, ಇಬ್ಬರು ಕಾರಿನ ಬಳಿ ನಿಂತಿದ್ದರು ಎಂಬುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಕೇವಲ ಏಳು ನಿಮಿಷಗಳ ಅವಧಿಯಲ್ಲಿ ಯಂತ್ರವನ್ನು ಕದ್ದಿಯುವುದು, ಬ್ಯಾಂಕಿನ ಸಿಬ್ಬಂದಿ ಸಹಕಾರವಿಲ್ಲದೇ ಸಾಧ್ಯವಿಲ್ಲ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಳ್ಳರ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದಾರೆ.












Click it and Unblock the Notifications