ಜಿನ್ನಾ ಮನೆಗೆ ಬಾಂಬಿಟ್ಟು, ಧ್ವಂಸಗೊಳಿಸಿದ ಉಗ್ರರು

ನೈಋತ್ಯ ಬಲೂಚಿಸ್ತಾನದ ಜೈರತ್ ನಗರದಲ್ಲಿರುವ ಮನೆಯಲ್ಲಿ ಜಿನ್ನಾ ತಮ್ಮ ಕೊನೆ ದಿನಗಳನ್ನು ಕಳೆದಿದ್ದರು. ಶನಿವಾರ ನಡೆದ ಬಾಂಬ್ ದಾಳಿಯಿಂದಾಗಿ ಮನೆಯ ಸುತ್ತಲೂ, ಮರದಿಂದ ನಿರ್ಮಿಸಿದ್ದ ಅಲಂಕಾರಿಕ ಗೋಡೆಯು ಸುಟ್ಟು ಭಸ್ಮವಾಗಿದೆ.
ಕ್ವಾಯಿದ್ ಎ ಅಜಾಂ ಎಂದು ಖ್ಯಾವಾಗಿರುವ ಈ ಕಟ್ಟಡದ ಸಮೀಪ ಉಗ್ರರು, ನಾಲ್ಕು ಬಾಂಬುಗಳನ್ನು ಹುದುಸಿಟ್ಟಿದ್ದರು. ಶನಿವಾರ ಅವುಗಳು ಸ್ಪೋಟಗೊಂಡಿವೆ. ಬಾಂಬ್ ಸ್ಪೋಟದ ನಂತರ ಕಟ್ಟಡದ ರಕ್ಷಣೆಗೆ ನಿಂತಿದ್ದ ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದಾಗಿ, ಇಬ್ಬರು ಮೃತಪಟ್ಟಿದ್ದಾರೆ.
ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಫೋಟಗೊಂಡಿರದ ಆರು ಬಾಂಬುಗಳನ್ನು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಪ್ರತಿಯೊಂದರಲ್ಲೂ ಮೂರು ಕೆ.ಜಿ ಸ್ಫೋಟಕಗಳನ್ನು ತುಂಬಿಸಿದ್ದ ಉಗ್ರರು, ಭಾರೀ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬಾಂಬ್ ಸ್ಪೋಟಗೊಂಡ ನಂತರ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸುವುದು ವಿಫಲವಾದ್ದರಿಂದ, ಕಟ್ಟಡ ಸಂಪೂರ್ಣ ಬೆಂಕಿಗಾಹುತಿಯಾಯಿತು. ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಹೊತ್ತಿ ಉರಿದ ಬೆಂಕಿಗೆ, ಜಿನ್ನಾ ಅವರ ನಿವಾಸ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
1892ರಲ್ಲಿ ಈ ಬೇಸಿಗೆ ಕಟ್ಟಡವನ್ನು ಕಟ್ಟಲಾಗಿತ್ತು. ಜಿನ್ನಾ ಅವರು ತಮ್ಮ ಅಂತಿಮ ದಿನಗಳನ್ನು ಈ ಮನೆಯಲ್ಲಿ ಕಳೆದಿದ್ದರು. ನಂತರ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿತ್ತು.












Click it and Unblock the Notifications