ಕಾವೇರಿ ವಿವಾದ : ಜೂನ್ ತಿಂಗಳು ತಮಿಳುನಾಡಿಗೆ ನೀರಿಲ್ಲ

ಬುಧವಾರ ನವದೆಹಲಿಯಲ್ಲಿ ನಡೆದ ಕಾವೇರಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ, ನೀರಿನ ಎರಡೂ ರಾಜ್ಯಗಳಲ್ಲಿ ಲಭ್ಯವಿರುವ ನೀರಿನ ಲಭ್ಯತೆ ಕುರಿತು ಪ್ರಮುಖವಾದ ಚರ್ಚೆ ನಡೆಯಿತು. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಕೇವಲ 3.7 ಟಿಎಂಸಿ ನೀರಿನ ಸಂಗ್ರಹಣೆ ಇದೆ ಎಂಬ ರಾಜ್ಯದವಾದವನ್ನು ಸಮಿತಿ ಒಪ್ಪಿಕೊಂಡಿತು.
ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ 3.5 ಟಿಎಂಸಿ ನೀರಿನ ಸಂಗ್ರಹಣೆ ಇದೆ. ಆದ್ದರಿಂದ ಕರ್ನಾಟಕ ಜೂನ್ ತಿಂಗಳಿನಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಬೇಡ ಎಂದು ಸಮಿತಿಯು ಆದೇಶ ನೀಡಿತು. ಕರ್ನಾಟಕದ ಪರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ತಮಿಳುನಾಡು ಕ್ಯಾತೆ : ಕರ್ನಾಟಕ 2012-13ನೇ ಸಾಲಿನಲ್ಲಿ ಹರಿಸಬೇಕಿದ್ದ 53 ಟಿಎಂಸಿ ಮತ್ತು ಪ್ರಸಕ್ತ ಜಲ ವರ್ಷದ ಜೂನ್ ತಿಂಗಳಿನಲ್ಲಿ ನೀಡಬೇಕಾದ 10 ಟಿಎಂಸಿ ನೀರು ಸೇರಿದಂತೆ ಒಟ್ಟು 63 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಕ್ಯಾತೆ ತೆಗೆದಿತ್ತು.
ತಮಿಳುನಾಡು ರಾಜ್ಯದ ಬೇಡಿಕೆ ಕುರಿತು ಆಕ್ಷೇಪಣೆ ಎತ್ತಿದ್ದ ಕರ್ನಾಟಕ, 74 ಪುಟಗಳ ಸ್ಪಷ್ಟನೆ ಮತ್ತು ಆಕ್ಷೇಪಗಳನ್ನು ಮೇಲ್ವಿಚಾರಣಾ ಸಮಿತಿಗೆ ಸಲ್ಲಿಸಿತ್ತು. ಉದ್ದೇಶಪೂರ್ವಕವಾಗಿ ಕರ್ನಾಟಕ ನೀರು ಹರಿಸಿಲ್ಲ ಎಂಬ ತಮಿಳುನಾಡು ಸರ್ಕಾರದ ಆರೋಪವನ್ನು ಸಮತಿ ನಿರಾಕರಿಸಿತು.
ಸಮಿತಿಯನ್ನೇ ಪ್ರಶ್ನಿಸಿದರು : ಸುಪ್ರೀಂಕೋರ್ಟ್ ಆದೇಶದಂತೆ ಅಸ್ತಿತ್ವಕ್ಕೆ ಬಂದಿರುವ ಮೇಲ್ವಿಚಾರಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ನ್ಯಾಯಾಧೀಕರಣದ ತೀರ್ಪನ್ನು ಜಾರಿ ಮಾಡಲು ಸಮಿತಿ ಆದ್ಯತೆ ನೀಡಬೇಕು. ಇಲ್ಲದಿದ್ದರೆ, ಸಮಿತಿಯ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತೇವೆ ಎಂದು ತಮಿಳುನಾಡು ಎಚ್ಚರಿಕೆ ನೀಡಿತು.
ಅವಲೋಕಿಸಿ ನೀರು : ಸಮಿತಿಯ ಆದೇಶದಂತೆ ಜೂನ್ ತಿಂಗಳಿನಲ್ಲಿ ತಮಿಳುನಾಡಿಗೆ, ರಾಜ್ಯ ನೀರು ಹರಿಸುವಂತಿಲ್ಲ. ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದೆ. ಜಲಾಶಯಗಳಿಗೆ ನೀರು ಬಂದ ಬಳಿಕ ಪರಿಸ್ಥಿತಿಯ ಅವಲೋಕನ ನಡೆಸಿ ತಮಿಳುನಾಡಿಗೆ ನೀರು ಹರಿಸುವುದಾಗಿ ಕರ್ನಾಟಕ ಸಮಿತಿಗೆ ಹೇಳಿಕೆ ನೀಡಿದೆ.












Click it and Unblock the Notifications