ಪಿಯುಸಿ ವಿದ್ಯಾರ್ಥಿನಿ ಹಾಸ್ಟೆಲಿನಲ್ಲಿ ಆತ್ಮಹತ್ಯೆ

ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ರೂಪಾ ಚವಡಿ (17) ಕಾಲೇಜಿಗೆ ಸೇರಿದ ಭಾಗೀರತಿ ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ರಾತ್ರಿ ಹಾಸ್ಟೆಲಿನಲ್ಲಿ ಇತರೆ ಸಹಪಾಠಿಗಳೆಲ್ಲ ಊಟಕ್ಕೆ ತೆರಳಿದ್ದಾಗ ಏಕಾಂಗಿಯಿದ್ದ ರೂಪಾ ತನ್ನ ಕೊಠಡಿಯಲ್ಲಿ ನೈಲಾನ್ ಹಗ್ಗದಿಂದ ಫ್ಯಾನಿಗೆ ನೇಣು ಹಾಕಿಕೊಂಡು ಸತ್ತಿದ್ದಾಳೆ. ರೂಪಾ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶೇಖರಪ್ಪ ಎಂಬುವವರ ಪುತ್ರಿ. ಶೇಖರಪ್ಪ ಊರಿನಲ್ಲಿ ಖಾಸಗಿ ಶಾಲೆಯಲ್ಲಿ ಕೆಲಸದಲ್ಲಿದ್ದಾರೆ.
ಇತ್ತೀಚೆಗೆ ರಜಾ ದಿನಗಳಲ್ಲಿ ಊರಿಗೆ ಹೋಗಿದ್ದಾಗ ಪೋಷಕರು ಉತ್ತಮವಾಗಿ ಓದುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಪ್ರಥಮ ಪಿಯುಸಿಯಲ್ಲಿ ರೂಪಾ ಶೇ. 86ರಷ್ಟು ಅಂಕ ಪಡೆದಿದ್ದಳು.
ಡೆತ್ ನೋಟ್ : ನನ್ನ ಸಾವಿಗೆ ನಾನೇ ಕಾರಣ. ನನ್ನನ್ನು ನಾನೇ ನಿಯಂತ್ರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಮನೆಯವರ ನಿರೀಕ್ಷೆಗೆ ತಕ್ಕಂತೆ ಓದಲು ನನ್ನಿಂದ ಸಾಧ್ಯವಾಗುತ್ತಿಲ್ಲ. ದಯವಿಟ್ಟು ಕ್ಷಮಿಸಿ' ಎಂದು ರೂಪಾ ಪತ್ರ ಬರೆದಿಟ್ಟು ಹೋಗಿದ್ದಾಳೆ. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications