ಆರ್ಥಿಕ ಸುಧಾರಣೆ ಎಂದರೆ ಏಕದಿನ ಕ್ರಿಕೆಟ್ ಅಲ್ಲ : ಚಿದು

"ಏಕದಿನ ಕ್ರಿಕೆಟ್ ನಲ್ಲಿ ಪ್ರತಿ ಕ್ಷಣ ಏನಾದರೂ ಬದಲಾವಣೆಯನ್ನು ಜನ ಬಯಸುತ್ತಾರೆ. ವಿಕೆಟ್ ಬೀಳಬೇಕು ಇಲ್ಲಾ ಬ್ಯಾಟ್ಸ್ ಮನ್ ಸಿಕ್ಸ್ ಎತ್ತಬೇಕು, ಆರ್ಥಿಕ ಸುಧಾರಣೆ ಆ ರೀತಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ಯುಪಿಎ ಸರ್ಕಾರ ಕೈಗೊಂಡಿದೆ.ಆರ್ಥಿಕ ಸುಧಾರಣೆಯಾಗುತ್ತಿದ್ದಂತೆ ಬಂಡವಾಳ ಹೂಡಿಕೆದಾರರು ಹೆಚ್ಚೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ" ಎಂದು ಪಿ ಚಿದಂಬರಂ ಹೇಳಿದರು.
ವಿತ್ತೀಯ ಕೊರತೆ ನೀಗಿಸಲು ಕೆಲವು ಕ್ರಮಗಳನ್ನು ಈಗಾಗಲೆ ತೆಗೆದುಕೊಳ್ಳಲಾಗಿದೆ. ಚಂದ್ರಶೇಖರ್ ಸಮಿತಿ ವರದಿ ಆಧಾರದ ಮೇಲೆ ಸೆಬಿ ನೀಡಿರುವ ಅಗತ್ಯ ಕ್ರಮಗಳನ್ನು ಪಾಲಿಸಲು ಮಾರ್ಗ ಸೂಚಿ ಸಿದ್ದವಾಗಿದೆ. ಅನಿಲ ದರ, ಎಫ್ ಡಿಐ ಮಿತಿ, ಕಲ್ಲಿದಲು ಗೊಂದಲ ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದರು.
ಹೆಚ್ಚು ಚಾಲ್ತಿ ಖಾತೆ ವಿತ್ತೀಯ ಕೊರತೆವುಳ್ಳ ರಾಷ್ಟ್ರಗಳ ಕರೆನ್ಸಿ ಮೌಲ್ಯ ಕುಸಿದಿರುವುದನ್ನು ಕಾಣಬಹುದು. ಭಾರತದ ರುಪಾಯಿ ಬಗ್ಗೆ ಹೆಚ್ಚಿನ ಆತಂಕ ಬೇಡ, ಶೀಘ್ರದಲ್ಲೇ ರುಪಾಯಿ ಮೌಲ್ಯ ಸುಧಾರಿಸಲಿದೆ ಎಂದು ಚಿದಂಬರಂ ಭರವಸೆ ನೀಡಿದರು.
ಇತ್ತೀಚೆಗೆ ಚಿನ್ನದ ಆಮದು ಸುಂಕ ಹೆಚ್ಚಳ ಮಾಡಲಾಗಿತ್ತು. ನಂತರ ಚಿನ್ನದ ಮೇಲಿನ ಹೂಡಿಕೆಗೆ ನಿರ್ಬಂಧ ಹೇಳಲಾಗಿತ್ತು. ಬ್ಯಾಂಕುಗಳಲ್ಲಿ ಚಿನ್ನದ ನಾಣ್ಯ ಖರೀದಿ, ಮಾರಾಟಕ್ಕೂ ಆಸ್ಪದವಿರಲಿಲ್ಲ. ಚಿನ್ನದ ವ್ಯಾವೋಹ ಸದ್ಯಕ್ಕೆ ಬಿಡಿ ಇದು ಆರ್ ಬಿಐ ನೀಡಿರುವ ಸಲಹೆ ಎಂದು ಚಿದಂಬರಂ ಅವರೇ ದೇಶದ ನಾಗರೀಕರಿಗೆ ಕಿವಿಮಾತು ಹೇಳಿದ್ದರು.
ಗುರುವಾರ(ಜೂ.13) ವಿತ್ತ ಸಚಿವ ಚಿದಂಬರಂ ಸುದ್ದಿಗೋಷ್ಠಿಯಲ್ಲಿ ODI ಮ್ಯಾಚ್ ಬಗ್ಗೆ ಹೇಳಿದ್ದು ಆಕರ್ಷಕವಾಗಿದ್ದು ಬಿಟ್ಟರೆ ಮತ್ತೇನು ಇರಲಿಲ್ಲ. ಇಂಧನ ಬೆಲೆ ಏರಿಕೆ, ಆಹಾರ ಹಣ ದುಬ್ಬರ ಹೆಚ್ಚಳ ತಗ್ಗಿಸುವ ಬಗ್ಗೆ ಏನು ಮಾತಿರಲಿಲ್ಲ. ಹೌದು ರುಪಾಯಿ ಮೌಲ್ಯ ಕುಸಿದರೆ ಜನಸಾಮಾನ್ಯರಿಗೇನು ಕೇಡು?












Click it and Unblock the Notifications