ಮೈಸೂರು : ಮಗನನ್ನು ಕಟ್ಟಿಹಾಕಿದ ತಂದೆ-ತಾಯಿ

ನಗರದ ಮಂಡಿಮೊಹಲ್ಲಾದ ಕಬೀರ್ ರಸ್ತೆ ನಿವಾಸಿಯಾದ ರಮೇಶ್ (45) ಗೃಹ ಬಂಧನದಲ್ಲಿದ್ದ ವ್ಯಕ್ತಿ. ಕೂಲಿ ಕಾರ್ಮಿಕನಾದ ಈತ ಪದೇ ಪದೇ ಮನೆಬಿಟ್ಟು ಹೋಗುತ್ತಿದ್ದ ಎಂಬ ಕಾರಣಕ್ಕೆ ಮನೆಯವರು 12 ವರ್ಷಗಳಿಂದ ಕೂಡಿ ಹಾಕಿದ್ದರು.
ರಮೇಶ್ ಮನೆಯ ಸ್ಥಳೀಯರು ಒಡನಾಡಿ ಸಂಸ್ಥೆಯವರಿಗೆ ಈ ಕುರಿತು ಮಾಹಿತಿ ನೀಡಿದ್ದರು. ಅವರು ಪೊಲೀಸರ ಸಹಾಯದಿಂದ ಬುಧವಾರ ರಮೇಶ್ ಮನೆಗೆ ತೆರಳಿದಾಗ, ಆತನನ್ನು ಸರಪಳಿಗಳಿಂದ ಬಿಗಿದು ಗೃಹ ಬಂಧನದಲ್ಲಿಟ್ಟ ವಿಷಯ ಬೆಳಕಿಗೆ ಬಂದಿದೆ.
ಮದುವೆಯಾಗಿ ಮಕ್ಕಳಿವೆ : ರಮೇಶ್ ಅವರಿಗೆ ಲಕ್ಷ್ಮೀ ಎಂಬುವವರೊಂದಿಗೆ ವಿವಾಹವಾಗಿದ್ದು, ಈ ದಂಪತಿಗೆ ಮಗುವಿದೆ. ಆದರೆ, ರಮೇಶ್ ಪದೇ ಪದೇ ಮನೆಬಿಟ್ಟು ಹೊರಗೆ ಹೋಗುತ್ತಿದ್ದರು. ಒಮ್ಮೆ ಹೋದರೆ ಮೂರು-ನಾಲ್ಕು ತಿಂಗಳು ಮನೆಗೆ ಮರಳುತ್ತಿರಲಿಲ್ಲ. ಇದರಿಂದ ಕೋಪಗೊಂಡ ಕುಟುಂಬದವರು ಆತನಿಗೆ ಸರಪಳಿ ಬಿಗಿದು ಕಟ್ಟಿಹಾಕಿದ್ದರು.
ಪತ್ನಿ ಸಮರ್ಥನೆ : ವಿವಾಹವಾಗುವ ವೇಳೆ ಪತಿಯ ವರ್ತನೆ ಬಗ್ಗೆ ನನಗೆ ತಿಳಿದಿರಲಿಲ್ಲ. ನಂತರ ಅವರು ಮನೆಬಿಟ್ಟು ಹೋಗುವ ವಿಷಯ ತಿಳಿಯಿತು. ಆದ್ದರಿಂದ ಅತ್ತೆ-ಮಾವ ಕೂಡಿಹಾಕಲು ನಿರ್ಧರಿಸಿದಾಗ ನಾನು ಬೆಂಬಲ ನೀಡಿದೆ. ನಾವು ಅವರನ್ನು ಮಾನವೀಯ ದೃಷ್ಠಿಯಿಂದಲೇ ನೋಡಿಕೊಳ್ಳುತ್ತಿದ್ದೇವೆ ಎಂದು ಪತ್ನಿ ಲಕ್ಷ್ಮೀ ಮಾಧ್ಯಮಗಳಿಗೆ ಹೇಳಿದ್ದಾರೆ.
ಚಿಕಿತ್ಸೆ ಕೊಡಿಸುತ್ತಿದ್ದೇವೆ : ಮಗನಿಗೆ ವಿಚಿತ್ರವಾದ ಕಾಯಿಲೆ ಇದೆ. ಪ್ರತಿತಿಂಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇವೆ. ನಂತರ ಮತ್ತೆ ಮನೆಯಲ್ಲಿ ಕೂಡಿ ಹಾಕುತ್ತೇವೆ ಎಂದು ರಮೇಶ್ ತಂದೆ-ತಾಯಿ ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲು : ಒಡನಾಡಿ ಸಂಸ್ಥೆಯವರು ರಮೇಶ್ ಅವರನ್ನು ಬಂಧಮುಕ್ತಗೊಳಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ರಮೇಶ್ ಅವರ ಆರೋಗ್ಯ ತಪಾಸಣೆ ನಡೆಸಿ ವರದಿ ನೀಡಿದ ನಂತರ, ಅವರಿಗೆ ಯಾವುದಾದದರೂ ಕಾಯಿಲೆ ಇದೆಯೇ ಎಂದು ತಿಳಿಯಲಿದೆ.
ರಮೇಶ್ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ವರದಿ ನೀಡಿದರೆ, ತಂದೆ-ತಾಯಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ರಾಜ್ಯದಲ್ಲಿ ಎರಡು ವಾರಗಳಿಂದ ಗೃಹಬಂಧನ ಪ್ರಕರಣಗಳು ವರದಿಯಾಗುತ್ತಲೇ ಇವೆ. (ಗೃಹಬಂಧನ ಪ್ರಕರಣಗಳು)












Click it and Unblock the Notifications