ನೀರಿನ ತೊಟ್ಟಿಗೆ ಬಿದ್ದು ಮಗು ದಾರುಣ ಸಾವು

ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಿ.ಚನ್ನಸಂದ್ರದ ನಿವಾಸಿಗಳಾದ ಸುಬ್ರಮಣಿ ಮತ್ತು ಅನಿತಾ ಅವರ ಪುತ್ರ ನಿತಿನ್ (6) ಸೋಮವಾರ ಸಂಜೆ ಮನೆಯ ಬಳಿ ಆಟವಾಡುತ್ತಿದ್ದ. ಆಗ ಆಕಸ್ಮಿವಾಗಿ ಮನೆಯ ಪಕ್ಕದಲ್ಲಿದ್ದ ದೊಡ್ಡ ನೀರಿನ ತೊಟ್ಟಿಗೆ ಬಿದ್ದು, ಮೃತಪಟ್ಟಿದ್ದಾನೆ.
ಪೋಷಕರು ಮನೆಯ ಕೆಲಸಗಳಲ್ಲಿ ನಿರತರಾಗಿದ್ದರು. ಕೆಲ ಸಮಯದ ನಂತರ ಮಗನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಈ ವೇಳೆ ನೀರಿನ ತೊಟ್ಟಿಯಲ್ಲಿ ನಿತಿನ್ ಮೃತದೇಹ ಪತ್ತೆಯಾಗಿದೆ.
ಉಪಕಾರದಿಂದ ಜೀವ ಹೋಯಿತು : ಮೂಲತಃ ಆಂಧ್ರ ಪ್ರದೇಶದವರಾದ ಸುಬ್ರಮಣಿ ದಂಪತಿ ಸುಮಾರು ಮೂರು ವರ್ಷಗಳಿಂದ ಚನ್ನಸಂದ್ರದಲ್ಲಿ ನೆಲೆಸಿದ್ದಾರೆ. ಇವರ ಮನೆಯಲ್ಲಿ ಬೋರ್ ವೆಲ್ ಇದ್ದು, ಉತ್ತಮವಾದ ನೀರು ದೊರೆಯುತ್ತದೆ. ಅಕ್ಕಪಕ್ಕದ ಮನೆಗಳ ಜನರು ಇವರ ಮನೆಯಿಂದ ನೀರು ತೆಗೆದುಕೊಂಡು ಹೋಗುತ್ತಾರೆ.
ಆದ್ದರಿಂದ, ಮನೆಯ ಪಕ್ಕದಲ್ಲಿ ದೊಡ್ಡ ನೀರಿನ ತೊಟ್ಟಿ ನಿರ್ಮಿಸಿದ್ದಾರೆ. ಸೋಮವಾರವೂ ಅಕ್ಕಪಕ್ಕದ ಮನೆಯವರು ನೀರು ತೆಗೆದುಕೊಂಡು ಹೋಗಲು ಆಗಮಿಸಿದಾಗ, ಅದರಲ್ಲಿ ನಿತಿನ್ ಶವ ತೇಲುತ್ತಿತ್ತು. ತಕ್ಷಣ ಅವರು ಪೋಷಕರಿಗೆ ವಿಷಯ ತಿಳಿಸಿದ್ದಾರೆ.
ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆಲವು ದಿನಗಳಿಂದ ನಗರದಲ್ಲಿ ನೀರಿನ ತೊಟ್ಟಿಗೆ ಬಿದ್ದು, ಮಕ್ಕಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಆದರೂ, ಪೋಷಕರು ಮಾತ್ರ ಜಾಗೃತರಾಗಿಲ್ಲ.
2013ರ ಪ್ರಕರಣಗಳು
ಜ.22 ಅಲ್ಮಾಸ್ (3) ಉಪ್ಪಾರಪೇಟೆ
ಮಾ 6, ಗೌತಮ್ (4) ಬಾಣಸವಾಡಿ
ಮಾ 22, ಭರತ್ (7), ಗಗನ್ (5) ಜೆ.ಜೆ.ನಗರ
ಏ. 25, ಸುವರ್ಣಾ (8),ಬಾಲಾಜಿ (7)












Click it and Unblock the Notifications