ಬಿಜೆಪಿ ಸಭೆ : ಅಡ್ವಾಣಿ ನಿರೀಕ್ಷೆಯಲ್ಲಿ ನಾಯಕರು

ಆರು ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಸಿದ್ಧತೆಯಂತಹ ಮಹತ್ವದ ವಿಷಯಗಳು ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರ ಸಮಿತಿಯ ಜವಾಬ್ದಾರಿ ವಹಿಸುವ ಕುರಿತು ಭಾನುವಾರ ಘೋಷಣೆಯಾಗುವ ಸಂಭವವಿದೆ.
ಶುಕ್ರವಾರದ ಸಭೆಗೆ ಅಡ್ವಾಣಿ ಉಮಾ ಭಾರತಿ, ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ, ಮೇನಕಾ ಗಾಂಧಿ, ರವಿಶಂಕರ ಪ್ರಸಾದ್, ವರುಣ ಗಾಂಧಿ ಅವರಂಥಹ ಪ್ರಮುಖ ನಾಯಕರು ಗೈರು ಹಾಜರಾಗಿದ್ದರು. ಬಹುತೇಕರು ಅನಾರೋಗ್ಯದ ಕಾರಣ ನೀಡಿ ಮೊದಲ ದಿನದ ಸಭೆಯಿಂದ ದೂರ ಉಳಿದಿದ್ದಾರೆ.
ನರೇಂದ್ರ ಮೋದಿ ಆಕರ್ಷಣೆ : ಪಣಜಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅವರಿಗೆ ಪಕ್ಷ ಯಾವ ಜವಾಬ್ದಾರಿ ನೀಡುತ್ತದೆ ಎಂದು ದೇಶವೇ ಕುತೂಹಲದಿಂದ ಎದುರು ನೋಡುತ್ತಿದೆ.
ಮೋದಿ ಅವರ ಹೆಗಲಿಗೆ ಪ್ರಚಾರದ ಚುಕ್ಕಾಣಿ ದೊರೆಯುವುದು ಬಹುತೇಕ ನಿಶ್ಚಿತ ಎಂಬ ವಾತಾವರಣ ಪಕ್ಷದೊಳಗೆ ನಿರ್ಮಾಣವಾಗಿದೆ. ಆದರೆ, ಅಡ್ವಾಣಿ ಅವರು ಸಭೆಗ ಆಗಮಿಸಿದ ಬಳಿಕವಷ್ಟೇ ಈ ಕುರಿತು ಚರ್ಚೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬಿಜೆಪಿ ಮೊದಲ ಬಾರಿಗೆ ರಾಷ್ಟ್ರೀಯ ಪದಾಧಿಕಾರಿಗಳ ಸಭೆಗೆ ಪಕ್ಷದ ಸಂಸದೀಯ ಮಂಡಳಿಯ ಸದಸ್ಯರನ್ನು ಆಹ್ವಾನಿಸಿತ್ತು. ಅಡ್ವಾಣಿ ಅವರನ್ನು ಹೊರತುಪಡಿಸಿ ಸಂಸದೀಯ ಮಂಡಳಿಯ ಸದಸ್ಯರೂ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಮೋದಿಗೆ ಆರೆಸ್ಸೆಸ್ ಬೆಂಬಲ : ಮೋದಿಗೆ ಪ್ರಚಾರ ಸಮಿತಿಯ ಜವಾಬ್ದಾರಿ ವಹಿಸಲು ಬಿಜೆಪಿ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಬೆಂಬಲ ನೀಡಿದೆ. ಪಕ್ಷದ ನಾಗಪುರದ ಕೇಂದ್ರ ಕಚೇರಿಯಿಂದಲೇ ಈ ಕುರಿತು ಸೂಚನೆ ಹೊರಬಿದ್ದಿದೆ ಎಂದು ಪಕ್ಷ ಮೂಲಗಳು ತಿಳಿಸಿವೆ.
ಅಡ್ವಾಣಿ ಅವರನ್ನು ಕಡೆಗಣಿಸಿ ಮೋದಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತಿದೆ ಎಂಬ ಸುದ್ದಿಗಳ ನಡುವೆಯೇ ಎರಡನೇ ದಿನದ ಕಾರ್ಯಕಾರಣಿ ಸಭೆ ಶನಿವಾರ ಆರಂಭವಾಗಲಿದೆ. ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಪಕ್ಷದೊಳಗಿನ ಅಸಮಾಧಾನ ಹೇಗೆ ಬಗೆಹರಿಸುತ್ತಾರೆ? ಎಂದು ಕಾದು ನೋಡಬೇಕು.












Click it and Unblock the Notifications