ಪಿಂಕ್ ಚಡ್ಡಿ ಹುಡ್ಗೀರೇಕೆ ಪ್ರೊಟೆಸ್ಟ್ ಮಾಡ್ಬಾರ್ದು?

ಹೋಗಲಿ, ಕರ್ನಾಟಕದಲ್ಲಿರುವ ಮಹಿಳಾ ಸಂಘಟನೆಗಳೆಲ್ಲ ಎಲ್ಲಿ ಹೋಗಿವೆ? ತಮಗೆ ಬೇಕಂದಾಗೆಲ್ಲ ಡೈಲಾಗು ಹೊಡೆಯುವ ಕನ್ನಡ ನಾಡಿನ ಬುದ್ಧಿಜೀವಿಗಳು ಮತ್ತು ವಿಚಾರವಾದಿಗಳೆಲ್ಲ ಎಲ್ಲಿ? ನಂಗಾನಾಚ್ ಮಾಡಿಸುವ ರೆಸಾರ್ಟ್ ಮೇಲೆ ಹಠಾತ್ತನೆ ದಾಳಿ ಮಾಡಿ ಒಂದು ವಾರದ ನಂತರ ವಿಡಿಯೋ ಬಿಡುಗಡೆ ಮಾಡಿಸುವ ಕನ್ನಡಪರ ಸಂಘಟನೆಗಳೆಲ್ಲ ಎಲ್ಲಿ ಹೋಗಿ ಕುಳಿತಿವೆ? ಸದನದಲ್ಲಿ ಕುಳಿತಿರುವ ರಾಜಕಾರಣಿಗಳೆಲ್ಲ ಏನು ಮಾಡುತ್ತಿದ್ದಾರೆ?
ಇವರಾರಿಗೂ ಬೆಂಗಳೂರಲ್ಲಿ ಸ್ವಂತ ತಂದೆಯೆ ತನ್ನ ವಯಸ್ಸಿಗೆ ಬಂದ ಮಗಳನ್ನು ನಾಲ್ಕು ವರ್ಷಗಳಿಂದ ಕೋಣೆಯಲ್ಲಿ ಬೆತ್ತಲುಮಾಡಿ ಕೂಡಿಹಾಕಿದ್ದು ಕಂಡಿಲ್ಲವೆ, ಸ್ವಂತ ಮಗನೇ ತನ್ನ ವಯಸ್ಸಾದ ತಂದೆಯ ಕಾಲಿಗೆ ಸರಪಳಿ ಬಿಗಿದು ಅಮಾನವೀಯವಾಗಿ ನಡೆದುಕೊಂಡಿರುವುದು ಕಣ್ಣಿಗೆ ಬಿದ್ದಿಲ್ಲವೆ, ಧಾರವಾಡದಲ್ಲಿ ತಾಯಿ ತನ್ನ ಮಾನಸಿಕ ಅಸ್ವಸ್ಥ ಮಗಳನ್ನು ಎರಡು ವರ್ಷಗಳಿಂದ ಕೊಠಡಿಯಲ್ಲಿ ಕೂಡಿ ಹಾಕಿದ್ದು ಹೃದಯಕ್ಕೆ ತಟ್ಟುವುದಿಲ್ಲವೆ?
ಮತ ಕೇಳಲು ಬೀದಿಬೀದಿ ಸುತ್ತಿದ್ದ ಪೂಜಾಗಾಂಧಿ, ರಮ್ಯಾ, ರಕ್ಷಿತಾ, ಭಾವನಾ, ರಾಗಿಣಿ ದ್ವಿವೇದಿ, ತಾರಾ, ಶ್ರುತಿ ಇವರಿಗೆಲ್ಲ ಈಗ ಏನಾಗಿದೆ. ಈಗಲೂ ಬೀದಿಗಿಳಿದು ಪ್ರತಿಭಟಿಸಬಹುದಲ್ಲ? ಮಹಿಳಾ ದೌರ್ಜನ್ಯದ ವಿರುದ್ಧ ಅಭಿಯಾನ ಪ್ರಾರಂಭಿಸಬಹುದಲ್ಲ?
ಇವರೆಲ್ಲ ಹೋಗಲಿ, ಕರ್ನಾಟಕ ಸರಕಾರದಲ್ಲಿ ಏಕೈಕ ಮಹಿಳಾ ಶಾಸಕಿಯಾಗಿರುವ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ, ಸಿನೆಮಾಗಳಲ್ಲಿ ಹೆಣ್ಣಿನ ನೋವನ್ನು ಹಲವಾರು ಬಿಂಬಿಸಿ ಚಪ್ಪಾಳೆ ಗಿಟ್ಟಿಸಿರುವ ಉಮಾಶ್ರೀ ಅವರಾದರೂ ಏನು ಮಾಡಿದ್ದಾರೆ? ನಿಮ್ಹಾನ್ಸಿಗೆ ಭೇಟಿ ನೀಡಿ ಅನ್ಯಾಯಕ್ಕೊಳಗಾದ ಮಹಿಳೆಗೆ ನಾಲ್ಕು ಸಾಂತ್ವನದ ಮಾತುಗಳನ್ನು ಹೇಳಿದರೆ ಸಾಕೆ? ಸಿನೆಮಾದಲ್ಲಿ ಡೈಲಾಗ್ ಹೇಳಿದಂತೆ ಸಾಕವ್ವನಂತೆ, ದೌರ್ಜನ್ಯವೆಸಗುವ ಮಹಿಳೆಯರು ನಡುಗುವಂತೆ ಖಡಕ್ಕಾಗಿ ಒಂದು ಡೈಲಾಗು ಹೊಡೆಯಲು ಇವರಿಗೆ ಸಾಧ್ಯವಿಲ್ಲವೆ? ಚಲನಚಿತ್ರವೇ ಬೇಕೆ, ನಿಜಜೀವನವೇ ಬೇರೆ, ಅಲ್ಲವೆ?
ಈ ಘಟನೆಗಳು ಕರ್ನಾಟಕದಲ್ಲೇ ನಡೆದಿವೆ ಮತ್ತು ದೆಹಲಿ ಸಾಮೂಹಿಕ ಅತ್ಯಾಚಾರಕ್ಕಿಂತ ಭೀಕರವಾಗಿವೆ. ಅಮಾನವೀಯ ಕೃತ್ಯಕ್ಕೆ ಒಳಗಾಗಿರುವ ಜೀವಗಳು ವರ್ಷಗಟ್ಟಲೆ ದಬ್ಬಾಳಿಕೆಗೆ ಒಳಗಾಗಿವೆ. ಕ್ಷಣಕ್ಷಣವೂ ಅವಮಾನವನ್ನು, ದೌರ್ಜನ್ಯವನ್ನು ಅವರು ಅನುಭವಿಸಿದ್ದಾರೆ. ಇದು ಅವರವರ ಮನೆಯ ವಿಚಾರವೆಂದು ಸುಮ್ಮನೆ ಬಿಟ್ಟರೆ ಹೇಗೆ? ಇವು ಬೆಳಕಿಗೆ ಬಂದಿರುವ ಬೆರಳೆಣಿಕೆಯ ಘಟನೆಗಳಷ್ಟೆ. ಇನ್ನೂ ಇಂಥ ಅದೆಷ್ಟು ಜೀವಗಳು ಕತ್ತಲ ಕೋಣೆಯಲ್ಲಿ ಜೀವವನ್ನು ತೇಯುತ್ತಿವೆಯೋ, ಬಲ್ಲವರಾರು?
ಪಿಂಕ್ ಚಡ್ಡಿ ಹುಡುಗಿಯರಿಗೆ, ಮಹಿಳಾ ಸಂಘಟಕಿಯರಿಗೆ, ನಾಡಿನ ಬುದ್ಧಿಜೀವಿಗಳಿಗೆ, ಘನ ವಿಚಾರವಾದಿಗಳಿಗೆ, ಕನ್ನಡಪರ ಹೋರಾಟಗಾರರಿಗೆ, ರೆಸಾರ್ಟುಗಳಿಗೆ ನುಗ್ಗಿ ಮಹಿಳೆಯರ ಮೇಲೆ ದಾಳಿ ಮಾಡುವವರಿಗೆ, ರಾಜಕಾರಣಿಗಳಿಗೆ ಈ ಘಟನೆಗಳನ್ನು ವಿರೋಧಿಸಿ ಬಹಿರಂಗವಾಗಿ ಹೇಳಿಕೆ ನೀಡುವ ತಾಕತ್ತಿಲ್ಲವೆ? ಹೋಗಲಿ ಇಂಥ ವಿಷಯ ಇಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವಂಥ ಚಲನಚಿತ್ರ ಮಾಡಲು ಯಾರಾದರೂ 'ಪ್ರಶಸ್ತಿ ವಿಜೇತ' ನಿರ್ಮಾಪಕರು ಮುಂದೆ ಬರ್ತಾರಾ? ಇವರೆಲ್ಲ ಯಾಕ್ಹೀಗೆ? ಇವೂ ಮನುಕುಲದ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗಳೇ ಅಲ್ಲವೆ?












Click it and Unblock the Notifications