ಬೆಳಗಾವಿ : ಅರಣ್ಯ ಇಲಾಖೆಯ ಹಸಿರೀಕರಣ ಯೋಜನೆ

ಅರಣ್ಯ ಇಲಾಖೆ ವಿವಿಧ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಗಿಡಗಳನ್ನು ನೆಟ್ಟು, ಪರಿಸರ ಸಂರಕ್ಷಣೆ ಮಾಡಲು ತೀರ್ಮಾನಿಸಿತ್ತು. ಆ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿದ್ದು, ನಗರದಲ್ಲಿ ಐವತ್ತು ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು, ಜನರಿಗೂ ಪರಿಸರ ಕಾಳಜಿ ಮೂಡಿಸಲು ಮುಂದಾಗಿದೆ.
ಮಾನ್ಸ್ ಸೂನ್ ಪ್ರಾರಂಭವಾದ ತಕ್ಷಣ ಪ್ರಾರಂಭವಾಗುವ ಈ ಹಸಿರೀಕರಣ ಯೋಜನೆ, ಸೆಪ್ಟೆಂಬರ್ ತಿಂಗಳಿನವರೆಗೆ ನಡೆಯಲಿದೆ. ಜೂನ್ 5 ರಂದು ಅಧಿಕೃತವಾಗಿ ಈ ಯೋಜನೆಗೆ ಚಾಲನೆ ದೊರೆಯಲಿದೆ. ನಾಲ್ಕು ತಿಂಗಳ ಅವಧಿಯಲ್ಲಿ ನಗರದಲ್ಲಿ ಐವತ್ತು ಸಾವಿರ ಸಸಿ ನೆಟ್ಟು, ಪೋಷಿಸುವ ಗುರಿ ಅರಣ್ಯ ಇಲಾಖೆಯ ಮುಂದಿದೆ.
ಬೆಳಗಾವಿ ಮಹಾನಗರ ಪಾಲಿಕೆ ಅರಣ್ಯ ಇಲಾಖೆಯ ಈ ಪ್ರಯತ್ನಕ್ಕೆ ಆರ್ಥಿಕ ಬೆಂಬಲ ನೀಡುತ್ತಿದ್ದು, ನಗರದ ಸುತ್ತಲಿನ ಗಿಡಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಗಿಡಗಳನ್ನು ನೆಡಲು ನಗರದ ಸುತ್ತ-ಮುತ್ತಲಿನ ಹಲವು ಸ್ಥಳಗಳನ್ನು ಗುರುತಿಸಲಾಗಿದೆ.
ಯಾವ ಸ್ಥಳಗಳು ಆಯ್ಕೆ : ಹೊಸ ಬಡಾವಣೆಗಳು, ಸರ್ಕಾರಿ ಭೂಮಿಗಳು, ಕಾರ್ಖನೆಗಳ ಆವರಣ, ಶಾಲೆ ಮತ್ತು ಕಾಲೇಜುಗಳಲ್ಲಿ ಮೊದಲನೇ ಹಂತದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತದೆ. ಶಾಲೆ, ಕಾಲೇಜು ಆವರಣದ ಗಿಡಗಳನ್ನು ಅವರೇ ನಿರ್ವಹಣೆ ಮಾಡಬೇಕು ಎಂಬ ನಿಯಮ ರೂಪಿಸಲಾಗಿದೆ.
ಯಾವ ಗಿಡಗಳು : ಹಸಿರೀಕರಣ ಯೋಜನೆಗಾಗಿ ಅರಣ್ಯ ಇಲಾಖೆ ಸಂಪಿಗೆ, ಬೇವು, ಗಂಧ ಸೇರಿದಂತೆ 12 ಜಾತಿಯ ಗಿಡಗಳನ್ನು ಆಯ್ಕೆ ಮಾಡಿಕೊಂಡಿದೆ. ಇವುಗಳಲ್ಲಿ ನಗರದ ಅಂದ ಹೆಚ್ಚಿಸುವ ಹೂವಿನ ಗಿಡಗಳು ಸೇರಿವೆ. ಕಾರ್ಖನೆಗಳಿಗೂ ಅವುಗಳ ಆವರಣದಲ್ಲಿ ಬೆಳೆಯುವ ಗಿಡಗಳನ್ನು ನೀಡಲು ನಿರ್ಧರಿಸಲಾಗಿದೆ.
ಅರಣ್ಯ ಇಲಾಖೆಯ ಈ ಮಹತ್ವಾಕಾಂಕ್ಷೆ ಯೋಜನೆಗೆ ಬುಧವಾರ ಚಾಲನೆ ದೊರೆಯಲಿದೆ. ಜನರು ತಮ್ಮ ಮನೆಯ ಅಂಗಳದಲ್ಲಿ ಒಂದೊಂದು ಗಿಡಗಳನ್ನು ನೆಟ್ಟು, ಯೋಜನೆಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.












Click it and Unblock the Notifications