ಮೋದಿಗೆ ಪರೋಕ್ಷ ಟಾಂಗ್ ಕೊಟ್ಟ ಅಡ್ವಾಣಿ

ಮಧ್ಯಪ್ರದೇಶದಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿರುವ ಅಡ್ವಾಣಿ, ವಾಜಪೇಯಿ ಅವರು ರಸ್ತೆ ಸೌಲಭ್ಯ ಸೇರಿದಂತೆ ದೇಶದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಆದರೂ ಅದರ ಬಗ್ಗೆ ಜಂಭ ಕೊಚ್ಚಿಕೊಳ್ಳದೆ, ವಿನಮ್ರವಾಗಿದ್ದರು.
ಚೌಹಾಣ್ ಸಹ ಮಧ್ಯಪ್ರದೇಶ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅನೇಕ ಸಾಧನೆಗಳನ್ನು ಮಾಡಿದರೂ, ಚೌಹಾಣ್ ವಾಜಪೇಯಿಯಂತೆ ಸತ್ಯ, ನಿಷ್ಠೆ, ಸೌಮ್ಯ ಸ್ವಭಾವ ಉಳಿಸಿಕೊಂಡಿದ್ದಾರೆ ಎಂದು ಬೆನ್ನುತಟ್ಟಿದ್ದಾರೆ.
ಇದೇ ವೇಳೆ ಪರೋಕ್ಷವಾಗಿ ಮೋದಿಗೆ ಟಾಂಗ್ ನೀಡಿದ ಅವರು, ಗುಜರಾತ್ ಮೊದಲೇ ಉತ್ತಮ ಅಭಿವೃದ್ಧಿ ಸಾಧಿಸಿತ್ತು. ನರೇಂದ್ರ ಮೋದಿ ಅದನ್ನು ಅತ್ಯುತ್ತಮ ರಾಜ್ಯವನ್ನಾಗಿ ಪರಿವರ್ತನೆ ಮಾಡಿದರು. ಆರೋಗ್ಯಕರವಾಗಿದ್ದ ರಾಜ್ಯವನ್ನು ಮೋದಿ ಮಾದರಿ ಮಾಡಿದರು.
ಆದರೆ, ಮಧ್ಯಪ್ರದೇಶ ರೋಗಗ್ರಸ್ಥವಾಗಿತ್ತು. ಅಂತಹ ರಾಜ್ಯವನ್ನು ಅಭಿವೃದ್ಧಿ ಹೊಂದಿದ ರಾಜ್ಯವಾಗಿ ಪರಿವರ್ತಿಸುವಲ್ಲಿ ಚೌಹಾಣ್ ಯಶಸ್ವಿಯಾಗಿದ್ದಾರೆ ಎಂದು ಅಡ್ವಾಣಿ ಮೆಚ್ಚುಗೆ ಸೂಚಿಸಿದರು. ಈ ಮೂಲಕ ಚೌಹಾಣ್ ಅವರ ಸಾಧನೆ ಮುಂದೆ ಮೋದಿ ಸಾಧನೆ ಅಲ್ಪ ಎಂದು ಪರೋಕ್ಷವಾಗಿ ಕುಟುಕಿದರು.
ಗುಜರಾತ್ ರಾಜ್ಯವನ್ನು ಮಾದರಿ ಮಾಡಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಆದರೆ, ಚೌಹಾಣ್ ಸವಾಲಾಗಿದ್ದ ಕೆಲಸವನ್ನು ಮಾಡಿದ್ದಾರೆ. ಆದ್ದರಿಂದ ನಿಜವಾದ ಅಭಿನಂದನೆ ಚೌಹಾಣ್ ಅವರಿಗೆ ಸಲ್ಲಬೇಕು ಎಂದು ಹೇಳಿದರು. ದೇಶದ ಅಭಿವೃದ್ದಿಗಾಗಿ ಮೋದಿ ಮತ್ತು ಚೌಹಾಣ್ ರಂತಹ ನಾಯಕರು ಬೇಕು ಎಂದು ಅಡ್ವಾಣಿ ಅಭಿಪ್ರಾಯಪಟ್ಟರು.












Click it and Unblock the Notifications