ಚಿಲ್ಲರೆ ಹಣಕ್ಕಾಗಿ ಐದು ಕೊಲೆ, ಸೈಕೋ ಕಿಲ್ಲರ್ ಬಂಧನ

ಬುಧವಾರ ಮೈಸೂರಿನ ಮಂಡಿ ಠಾಣಾ ಪೊಲೀಸರು, ಶಾಂತಿನಗರ ನಿವಾಸಿ ಕೈಸರ್ (24) ಹಾಗೂ ಆತನ ಸಹಚರ ಹರೀಶ್(26) ಬಂಧಿತರು. ನಿರುದ್ಯೋಗಿಯಾಗಿದ್ದ ಕೈಸರ್, ಕುಡಿತ ಸೇರಿದಂತೆ ದುಶ್ಚಟಕ್ಕೆ ಬಲಿಯಾಗಿದ್ದ. ಹಣ ಗಳಿಸಲು ಈತ ಕೊಲೆ ಮಾಡುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ಕೆ.ಎಲ್.ಸುಧೀರ್ ಹೇಳಿದ್ದಾರೆ.
ಬಂಧಿತ ಕೈಸರ್ ಮತ್ತು ಹರೀಶ್ ಮೇ 19ರಂದು ಮೈಸೂರಿನ ಆರ್ಎಂಸಿ ಬಳಿ, ಕೂಲಿ ಕಾರ್ಮಿಕನ ಜೊತೆ ಜಗಳವಾಡಿ, ಆತನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರು. ಇವರಿಬ್ಬರ ಮೇಲೆ ಮೈಸೂರಿನ ವಿವಿಧ ಠಾಣೆಗಳಲ್ಲಿ ಐದಕ್ಕೂ ಹೆಚ್ಚು ಕೊಲೆ ಪ್ರಕರಣಗಳು ದಾಖಲಾಗಿವೆ.
ಕೈಸರ್ ಓರ್ವ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದಲ್ಲದೆ, ನೂರು ರೂಪಾಯಿಗಳಿಗಾಗಿಯೂ ಕೊಲೆ ಮಾಡಿದ್ದೇನೆ ಎಂದು ಪೊಲೀಸರು ಹೇಳಿದ್ದಾರೆ. ಕೈಸರ್ ಮೇಲೆ ಉದಯಗಿರಿ, ಲಷ್ಕರ್, ಹಾಗೂ ವಿವಿ ಪುರಂ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣಗಳು ದಾಖಲಾಗಿದ್ದವು.
ಹರೀಶ್ ಸಹ ಕೈಸರ್ ಮಿತ್ರನಾಗಿದ್ದು ಕೊಲೆ ಪ್ರಕರಣಗಳಲ್ಲಿ ಆತನಿಗೆ ಸಹಾಯ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜನರ ಪರಿಚಯ ಮಾಡಿಕೊಂಡು ಸ್ನೇಹ ಸಂಪಾದಿಸಿ, ಕುಡಿದ ಮತ್ತಿನಲ್ಲಿ ಅವರನ್ನು ಕೊಂದು ಹಣ ದೋಚುವುದೇ ಇವರ ಕೆಲಸವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರು ಜೊತೆಯಾಗಿ ಉದಯಗಿರಿ ಠಾಣಾ ವ್ಯಾಪ್ತಿಯ ಕೆ.ಆರ್.ನಗರದ ನಿವಾಸಿ ಲತಾ (40), ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ಚಾಂದ್ ಷರೀಫ್, ಗುಂಡ್ಲುಪೇಟೆಯಲ್ಲಿ ಬಸವಶೆಟ್ಟಿಯನ್ನು ಕೊಲೆ ಮಾಡಿದ್ದರು.
ಹೊಳೆ ನರಸೀಪುರದಲ್ಲಿ ಸೋಮಚಾರಿ ಎಂಬುವವನ್ನು ಕೊಲೆ ಮಾಡಿ ಎರಡು ಸಾವಿರ ರೂಪಾಯಿ ದೋಚಿದ್ದರು. ಇವರ ಬಂಧನದ ಮೂಲಕ ನಗರದಲ್ಲಿ ಒಂಭತ್ತು ತಿಂಗಳಿನಲ್ಲಿ ನಡೆದ ಐದು ಕೊಲೆಗಳ ರಹಸ್ಯ ಬಯಲಾಗಿದೆ.












Click it and Unblock the Notifications