ರವಿವರ್ಮಾ ಕುಮಾರ್ ನೂತನ ಅಡ್ವೋಕೇಟ್ ಜನರಲ್

ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ರವಿಮರ್ಮಾ ಕುಮಾರ್ ಅವರನ್ನು ನೂತನ ಅಡ್ವೋಕೇಟ್ ಜನರಲ್ ಆಗಿ ನೇಮಿಸಲಾಗಿದೆ ಎಂದು ಹೇಳಿದರು.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರಾದ ರವಿಮರ್ಮಾ ಕುಮಾರ್ 1975ರಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. ರಾಜ್ಯದ ಹೈ ಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ಸುಮಾರು ಮೂವತ್ತು ಸಾವಿರ ಪ್ರಕರಣಗಳಲ್ಲಿ ವಾದ ಮಂಡಿಸಿ ಅಪಾರ ಅನುಭವ ಪಡೆದಿದ್ದಾರೆ.
ಪ್ರಗತಿಪರ ಚಿಂತಕರಾಗಿರುವ ರವಿವರ್ಮಾ ಕುಮಾರ್ ಹಿಂದುಳಿದ ಆಯೋಗದ ಮೊದಲ ಅಧ್ಯಕ್ಷರಾಗಿ 1997ರಲ್ಲಿ ನೇಮಕಗೊಂಡರು. ಮೂರು ವರ್ಷಗಳ ಕಾಲ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ 85 ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಸಂವಿಧಾನ, ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಂತಾದ ವಿಷಯಗಳಲ್ಲಿ ರವಿವರ್ಮಾ ಕುಮಾರ್ ಅಪಾರವಾದ ಅನುಭವ ಹೊಂದಿದ್ದು, ನಿರರ್ಗಳವಾಗಿ ವಾದ ಮಂಡಿಸುವಷ್ಟು ಪ್ರತಿಭಾವಂತರಾಗಿದ್ದಾರೆ.
ಬುಧವಾರ ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಟಿ.ವಿ.ಜಯಚಂದ್ರ ರವಿವರ್ಮಾ ಕುಮಾರ್ ಅವರ ಜೊತೆ ಮಾತುಕತೆ ನಡೆಸಿ ಅಡ್ವೋಕೇಟ್ ಜನರಲ್ ಹುದ್ದೆಗೆ ನೇಮಿಸುವುದಾಗಿ ಮಾತುಕತೆ ನಡೆಸಿದ್ದರು. ಗುರುವಾರ ಅಧಿಕೃತ ಆದೇಶ ಹೊರಬಿದ್ದಿದ್ದು, ಅಡ್ವೋಕೇಟ್ ಜನರಲ್ ಆಗಿದ್ದ ವಿಜಯಶಂಕರ್ ಅವರ ಸ್ಥಾನಕ್ಕೆ ರವಿವರ್ಮಾ ಕುಮಾರ್ ಅವರನ್ನು ನೇಮಿಸಲಾಗಿದೆ.












Click it and Unblock the Notifications