ಹುದ್ದೆಗೆ ರಾಜೀನಾಮೆ ನೀಡಿದ ಸ್ವಾಮಿ ಅಂಡ್ ಸ್ವಾಮಿ!

ಮಂಗಳವಾರ ನವದೆಹಲಿಗೆ ಆಗಮಿಸಿದ ಉಭಯ ನಾಯಕರು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರನ್ನು ಭೇಟಿಯಾಗಲು ತೆರಳಿದರು. ಆದರೆ, ಮೀರಾ ಕುಮಾರ್ ವಿದೇಶ ಪ್ರವಾಸದಲ್ಲಿರುವುದರಿಂದ ಲೋಕಸಭಾ ಜಂಟಿ ಕಾರ್ಯದರ್ಶಿ ವಿ.ಆರ್.ರಮೇಶ್ ಅವರಿಗೆ ರಾಜೀನಾಮೆ ಪತ್ರ ನೀಡಿದರು.
ಇದರಿಂದ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರದ ಸಂಸದರ ಸ್ಥಾನ ತೆರವಾಗಿದ್ದು, ಉಪ ಚುನಾವಣೆ ನಡೆಯಬೇಕಾಗಿದೆ. ಸಂಸದರ ರಾಜೀನಾಮೆಯಿಂದಾಗಿ ಲೋಕಸಭೆಯಲ್ಲಿ ಜೆಡಿಎಸ್ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಬ್ಬರೆ ಉಳಿದಿದ್ದಾರೆ.
ಜೆಡಿಎಸ್ ಯುಪಿಎ ಸರ್ಕಾರಕ್ಕೆ ಬಾಹ್ಯ ಬೆಂಬಲ ಒದಗಿಸಿತ್ತು. ಸದ್ಯ ಇಬ್ಬರು ಸಂಸದರು ರಾಜೀನಾಮೆ ನೀಡಿರುವುದರಿಂದ ಯುಪಿಎ ಸರ್ಕಾರಕ್ಕೆ ಇಬ್ಬರು ಸಂಸದರ ಬೆಂಬಲ ಕಡಿಮೆಯಾಗಿದೆ. ಯುಪಿಎ ಸರ್ಕಾರದ ಒಂದು ವರ್ಷದ ಅವಧಿ ಬಾಕಿ ಇದ್ದು, ತೆರವಾದ ಸ್ಥಾನಗಳಿಗೆ ಆರು ತಿಂಗಳವೊಳಗೆ ಚುನಾವಣೆ ನಡೆಸಬೇಕಾಗಿದೆ.
ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿರುವ ಕುಮಾರಸ್ವಾಮಿ ಮತ್ತು ನಾಗಮಂಗಲ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಚೆಲುವರಾಯ ಸ್ವಾಮಿ ವಿಧಾನಸೌಧ ಪ್ರವೇಶಿಸಲಿದ್ದಾರೆ. ವಿಧಾನಮಂಡಲ ಅಧಿವೇಶನದಲ್ಲಿ, ಆಡಳಿತ ಪಕ್ಷ ಮತ್ತು ತಮ್ಮ ಕುಟುಂಬದ ವಿರೋಧಿ ಸಿಎಂ ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಬಹುದು.
ಮಾಜಿ ಸಿಎಂಗಳ ಸಮಾಗಮ : ಈ ಬಾರಿಯ ವಿಧಾನಭೆ ಅಧಿವೇಶನ ಬಹಳ ಮಹತ್ವ ಪಡೆದುಕೊಂಡಿದೆ ನಾಲ್ವರು ಮಾಜಿ ಸಿಎಂಗಳು ಸದನದವೊಳಗೆ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಕಾದು ಕುಳಿತಿದ್ದಾರೆ.
ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ವಿಧಾನಸಭೆ ಕಲಾಪದಲ್ಲಿ ಹಾಜರಿದ್ದರೆ, ಡಿ.ವಿ.ಸದಾನಂದಗೌಡರು ವಿಧಾನಪರಿಷತ್ ನಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದ್ದಾರೆ.
ಲಾಡ್ ರಾಜೀನಾಮೆ : ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಗಣಿ ಉದ್ಯಮಿ ಅನಿಲ್ ಲಾಡ್ ಸೋಮವಾರ ತಮ್ಮ ರಾಜ್ಯ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಸೋಮವಾರ ರಾಜ್ಯಸಭಾ ಅಧ್ಯಕ್ಷ ಹಾಗೂ ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಅವರನ್ನು ಭೇಟಿ ಮಾಡಿದ ಅನಿಲ್ ಲಾಡ್ ರಾಜಿನಾಮೆ ಸಲ್ಲಿಸಿದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅನಿಲ್ ಲಾಡ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯಾವುದೇ ಸಚಿವ ಸ್ಥಾನವನ್ನು ಕಾಂಗ್ರೆಸ್ ನೀಡಿಲ್ಲ.












Click it and Unblock the Notifications