ಸ್ಪಾಟ್ ಫಿಕ್ಸಿಂಗ್: ನ್ಯಾಯಾಂಗ ಬಂಧನಕ್ಕೆ 14 ಆರೋಪಿಗಳು
}ಬೆಂಗಳೂರು, ಮೇ.21: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕೇತ್ ನ್ಯಾಯಾಲಯ ಸಂಜೆ 5.05 ಗಂಟೆಗೆ ಮಹತ್ವದ ಆದೇಶ ಹೊರ ಹಾಕಿದ್ದು, ಯಾವೊಬ್ಬ ಆರೋಪಿಗೂ ಜಾಮೀನು ನೀಡಿಲ್ಲ. ಜೊತೆಗೆ ಎಲ್ಲಾ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಕೋರ್ಟ್ ನಿರ್ದೇಶಿಸಿದೆ.
ಐಪಿಎಲ್ ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಶಾಂತ್ ಸೇರಿದಂತೆ ಉಳಿದ ಆರೋಪಿಗಳ ಕಸ್ಟಡಿ ಅವಧಿ ಮಂಗಳವಾರಕ್ಕೆ ಅಂತ್ಯಗೊಂಡಿತ್ತು. ಶ್ರೀಶಾಂತ್ ಬಗ್ಗೆ ಇನ್ನಷ್ಟು ನಾಚಿಕೆಗೇಡಿನ ಸಂಗತಿಗಳು ಹೊರಬಿದ್ದಿದೆ. ಈ ನಡುವೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಐಪಿಎಲ್ ಪಂದ್ಯಾವಳಿ ನಿಷೇಧಿಸುವ ಅಗತ್ಯವಿಲ್ಲ ಎಂದಿದೆ.

ಸ್ಪಾಟ್ ಫಿಕ್ಸಿಂಗ್ ಕುರಿತು ಕಾಲ ಕಾಲಕ್ಕೆ ಬೆಳವಣಿಗೆಗಳು:
ಸಮಯ 5.10: ಎಲ್ಲಾ 14 ಆರೋಪಿಗಳನ್ನು ಪೊಲೀಸ್ ಕಸ್ಟಡಿ ಬದಲಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದು ದೆಹಲಿ ಹಾಗೂ ಮುಂಬೈ ಪೊಲೀಸರಿಗೆ ಹಿನ್ನಡೆಯುಂಟಾಗಿದೆ.
* ದೆಹಲಿ ಪೊಲೀಸರ ವಶದಿಂದ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲು ಮುಂಬೈ ಪೊಲೀಸರು ಯತ್ನಿಸಿದ್ದರು. ಈಗ ಸುಪ್ರೀಂಕೋರ್ಟ್ ಆದೇಶದಿಂದ ಮತ್ತೊಮೆ ಅರ್ಜಿ ಸಲ್ಲಿಸಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಬೇಕಿದೆ.
ಸಮಯ 4.30: ಬಾಲಿವುಡ್ ನಟ, ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವಿಂದು ದಾರಾ ಸಿಂಗ್ ರಾಂಧ್ವಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸಮಯ 3.30: ಐಪಿಎಲ್ ಕಳ್ಳಾಟಕ್ಕೂ ಬಾಲಿವುಡ್ ಗೂ ನಂಟಿರುವುದು ಪತ್ತೆ. ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಬುಕ್ಕಿಗಳ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ದಾರಾ ಸಿಂಗ್ ಅವರ ಪುತ್ರ ವಿಂದೂ ದಾರಾಸಿಂಗ್ ಅವರನ್ನು ಮುಂಬೈ ಕ್ರೈಮ್ ಬ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.
ಸಮಯ 2.40: ಐಪಿಎಲ್ ನ ಸ್ಪಾಟ್ ಫಿಕ್ಸಿಂಗ್ ಕುರಿತು ಬಿಸಿಸಿಐನ ರವಿ ಸವಾನ್ ನಡೆಸಿರುವ ತನಿಖೆ ಮುಂದುವರೆಸುವಂತೆ ಸುಪ್ರೀಂಕೋರ್ಟ್ ಸೂಚಿಸಿದ್ದು, ಎರಡು ವಾರದೊಳಗೆ ವರದಿ ನೀಡುವಂತೆ ಆದೇಶಿಸಿದೆ. ಹೀಗಾಗಿ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಕ್ಕೆ ಇದ್ದ ಅಡ್ಡಿ ಆತಂಕ ದೂರಾಗಿದೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ 20 ನಿಮಿಷಗಳ ವಿಚಾರಣೆ ನಡೆಸಲಾಯಿತು. ಐಪಿಎಲ್ ಉಳಿದ ಪಂದ್ಯಗಳನ್ನು ನಿಷೇಧಿಸಲು ಕಾರಣಗಳು ಪೂರಕವಾಗಿ ಸಿಕ್ಕಿಲ್ಲ. ಬಿಸಿಸಿಐ ವೈಜ್ಞಾನಿಕವಾಗಿ ತನ್ನ ತನಿಖೆ ಮುಂದುವರೆಸಲಿ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.
ಸಮಯ 11.40 : ವಿಶೇಷ ನ್ಯಾಯಾಲಯದಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಿಗಳ ವಿಚಾರಣೆ ಆರಂಭ
* ಮಾಜಿ ರಣಜಿ ಆಟಗಾರ ಬಾಬುರಾವ್ ಯಾದವ್ ಬಂಧನ. ಚೆನ್ನೈನಲ್ಲಿ ಪ್ರಶಾಂತ್ ಹೆಸರಿನ ಬುಕ್ಕಿ ಸೆರೆ
* ಶ್ರೀಶಾಂತ್ ಜೊತೆ ಕಾಣಿಸಿಕೊಂಡಿದ್ದ ಯುವತಿಯಲ್ಲಿ ಒಬ್ಬಳು ಮರಾಠಿ ಮೂಲದ ನಟಿ ಎಂದು ಖಾತ್ರಿಯಾಗಿದೆ. ಪೊಲೀಸರು ಹೆಸರು ಬಹಿರಂಗಗೊಳಿಸಿಲ್ಲ.
* ಯುವತಿಯರು ಕೊರಿಯರ್ ರೀತಿಯಲ್ಲಿ ಆಟಗಾರರು ಹಾಗೂ ಬುಕ್ಕಿಗಳ ನಡುವೆ ಸಂಪರ್ಕ ಹೊಂದಿದ್ದರು.
ಬೇಲ್ ಸಿಗೋದು ಕಷ್ಟ: ಐಪಿಎಲ್ ಬೆಟ್ಟಿಂಗ್, ವಂಚನೆ ಪ್ರಕರಣದ ಜೊತೆಗೆ ಈಗ ಶ್ರೀಶಾಂತ್ ಮೇಲೆ ಇನ್ನಷ್ಟು ಕೇಸುಗಳು ದಾಖಲಾಗಲಿದೆ. ಬಂಧನ ವೇಳೆ ಪಾನಮತ್ತರಾಗಿದ್ದು ಹಾಗೂ ಅನುಮಾನಾಸ್ಪದವಾಗಿ ಯುವತಿಯರ ಜೊತೆ ಓಡಾಟ ಎಲ್ಲವೂ ಶ್ರೀಶಾಂತ್ ಅವರ ಜಾಮೀನು ಅರ್ಜಿಗೆ ಮುಳುವಾಗಲಿದೆ. ದೆಹಲಿ ಪೊಲೀಸರಿಂದ ಶ್ರೀಶಾಂತ್ ರನ್ನು ತಮ್ಮ ಸುಪರ್ದಿಗೆ ನೀಡಬೇಕೆಂದು ಮುಂಬೈ ಪೊಲೀಸರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಮುಂಬೈ ಪೊಲೀಸರಿಗೆ ಶ್ರೀಶಾಂತ್ ಉಳಿದು ಕೊಂಡಿದ್ದ ಸ್ಟಾರ್ ಹೋಟೆಲಿನ ಕೊಠಡಿಯಿಂದ ಸಿಕ್ಕಿರುವ ಲ್ಯಾಪ್ ಟಾಪ್, ಐಪ್ಯಾಡ್, ನಗದು ಹಾಗೂ ರಶೀದಿಗಳು ಫಿಕ್ಸಿಂಗ್ ಪ್ರಕರಣಕ್ಕೆ ಹೊಸ ಆಯಾಮವನ್ನು ನೀಡುವ ಸಾಧ್ಯತೆಯಿದೆ.
ದೆಹಲಿ ಪೊಲೀಸರ ನೀಡಿರುವ ಮಾಹಿತಿ ಪ್ರಕಾರ ಬಂಧನ ವೇಳೆ ಶ್ರೀಶಾಂತ್ ಜೊತೆ ಇಬ್ಬರು ಮಹಿಳೆಯರು ಇದ್ದರು. ಇವರನ್ನು ಬೆಂಗಳೂರಿನ ರಿಚರ್ಡ್ ಟೌನ್ ಹಾಗೂ ರಿಚ್ಮಂಡ್ ಟೌನ್ ನಿವಾಸಿಗಳು ಎಂದು ಗುರುತಿಸಲಾಗಿದೆ. ಮುಂಬೈನಲ್ಲಿ ಶ್ರೀಶಾಂತ್ ಜೊತೆ ಕಾರ್ಟರ್ ರಸ್ತೆಯಲ್ಲಿ SUV ವಾಹನದಲ್ಲಿ ಶ್ರೀಶಾಂತ್ ಜೊತೆ ಈ ಇಬ್ಬರು ಕಾಣಿಸಿಕೊಂಡಿದ್ದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬಂಧನದ ವೇಳೆ ಶ್ರೀಶಾಂತ್ ಪಾನಮತ್ತರಾಗಿದ್ದರು. ಪೊಲೀಸರು ತಮ್ಮ ಐಡಿ ಕಾರ್ಡ್ ತೋರಿಸಿದಾಗ ಕೆಲ ಕಾಲ ಸುಮ್ಮನಿದ್ದರು. ಆದರೆ, ನಂತರ ಸಿಟ್ಟಿಗೆದ್ದು ನನಗೆ ಮಹಾರಾಷ್ಟ್ರ, ಕೇರಳ ಮುಖ್ಯಮಂತ್ರಿಗಳು ಚೆನ್ನಾಗಿ ಪರಿಚಯ ನನ್ನನ್ನು ಹೇಗೆ ಬಂಧಿಸುತ್ತೀರಾ? ಎಂದು ಕೂಗಾಟ ನಡೆಸಿದರು ಎಂದು ಪೊಲೀಸರು ಹೇಳಿದ್ದಾರೆ.
ಐಪಿಎಲ್ ನ ಆರನೆ ಆವೃತ್ತಿಯಲ್ಲಿ ನಡೆದಿರುವ 15 ಪಂದ್ಯಗಳ ಬಗ್ಗೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಈ ಬಾರಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭೂಗತ ಪಾತಕಿಗಳ ನಂಟು ಹೊಂದಿರುವುದು ಕಂಡುಬಂದಿದೆ.
ನವದೆಹಲಿ, ಮುಂಬೈ, ಅಹಮದಾಬಾದ್, ಕೊಚ್ಚಿ, ಕರಾಚಿ, ದುಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬುಕ್ಕಿಗಳು ಅಲ್ಲಿಂದಲೇ ಕುಳಿತು ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ. ಮುಂಬೈ ಇಂಡಿಯನ್ಸ್, ಕಿಂಗ್ಸ್ ಪಂಜಾಬ್, ಪುಣೆ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್ ಡೇವಿಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಪ್ರಮುಖ ಪಂದ್ಯಗಳು ನಡೆಯುವಾಗ ರಾಜಸ್ಥಾನ್ ರಾಯಲ್ಸ್ ನ ಈ ಆಟಗಾರರು ಬುಕ್ಕಿಗಳ ಜತೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರೆದಿದೆ.












Click it and Unblock the Notifications