ಪ್ರಧಾನಿ ಅಭ್ಯರ್ಥಿ ಗುಟ್ಟು ಬಿಟ್ಟು ಕೊಡದ ಬಿಜೆಪಿ

ಮಂಗಳವಾರ ಸಂಸದೀಯ ಮಂಡಳಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, 2014ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧವಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದರು.
ಭ್ರಷ್ಟಚಾರದಿಂದ ಕೂಡಿದ ಕೇಂದ್ರ ಯುಪಿಎ ಸರ್ಕಾರ ಮತ್ತೊಮ್ಮೆ ದೇಶದ ಆಡಳಿತದ ಚುಕ್ಕಾಣಿ ಹಿಡಿಯಬಾರದು. ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಲು ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟ ತಂತ್ರ ರೂಪಿಸಿದೆ ಎಂದು ಅವರು ಹೇಳಿದರು.
ಎನ್ ಡಿಎ ಮೈತ್ರಿಕೂಟದಲ್ಲಿ ಯಾವುದೇ ಭಿನ್ನಮತವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಒಟ್ಟಾಗಿ ಚುನಾವಣೆ ಎದುರಿಸಿ ಗೆಲವು ಸಾಧಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಭ್ರಷ್ಟಾಚಾರದಿಂದ ಕೂಡಿದ ಕಾಂಗ್ರೆಸ್ ಪಕ್ಷದ ದುರಾಡಳಿತವೇ ಬಿಜೆಪಿಯ ಚುನಾವಣಾ ಪ್ರಚಾರದ ಪ್ರಮುಖ ಅಸ್ತ್ರವಾಗಿದೆ ಎಂದರು.
ಪ್ರಧಾನಿ ಅಭ್ಯರ್ಥಿ : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಮೈತ್ರಿಕೂಟದ ಕೆಲವು ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಆ ಪಕ್ಷಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಶೀಘ್ರದಲ್ಲೇ ಪ್ರಧಾನಿ ಅಭ್ಯರ್ಥಿ ಯಾರು? ಎಂದು ಘೋಷಿಸಲಾಗುವುದು ಎಂದು ತಿಳಿಸಿದರು.
ಸಾಮಾಜಿಕ ತಾಣಗಳ ಬಳಕೆ : ದೇಶದಲ್ಲಿ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರನ್ನು ತಲುಪಿ ಚುನಾವಣಾ ಪ್ರಚಾರ ಮಾಡಲು ಸಾಮಾಜಿಕ ತಾಣಗಳನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಫೇಸ್ ಬುಕ್, ಟಿಟ್ವರ್, ವೆಬ್ ಸೈಟ್ ಗಳ ಮೂಲಕವೂ ಬಿಜೆಪಿ ಚುನಾವಣಾ ಪ್ರಚಾರ ನಡೆಸಲು ಪಕ್ಷ ಯೋಜನೆ ತಯಾರಿಸಿದೆ. ಐದು ರ್ವಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ಹಗರಣಗಳನ್ನು ದೇಶದ ಜನರಿಗೆ ತಲುಪಿಸಿ ಭ್ರಷ್ಟ ಸರ್ಕಾರವನ್ನು ತೊಲಗಿಸಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡುತ್ತೇವೆ ಎಂದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಭೆಯ ಪ್ರಮುಖ ಆಕರ್ಷಣೆಯಾಗಿದ್ದರು. ಬಿಜೆಪಿ ಸಂಸದೀಯ ಮಂಡಳಿಗೆ ನೇಮಕವಾದ ನಂತರ ನರೇಂದ್ರ ಮೋದಿ ಇಂದು ಮೊದಲ ಬಾರಿಗೆ ಸಂಸದೀಯ ಮಂಡಳಿ ಸಭೆಗೆ ಹಾಜರಾಗಿದ್ದರು.












Click it and Unblock the Notifications