ಗೋಹತ್ಯೆ ನಿಷೇಧ ಸಿಎಂ ಸಿದ್ದು ಬೆಂಬಲಕ್ಕೆ ಟಿಪ್ಪು ರಂಗ

ಪ್ರಮಾಣವಚನ ಸ್ವೀಕರಿಸಿದ ದಿನ ಅಗ್ಗದ ಅಕ್ಕಿ, ಮಾರನೆಯ ದಿನವೇ ಅಗ್ಗದ ಸಾರಾಯಿ ನೀಡುವ ಬಗ್ಗೆ ಸಿದ್ದರಾಮಯ್ಯ ಮಾತನ್ನಾಡಿದ್ದರು. ನಂತರ ಸುದ್ದಿಗೋಷ್ಠಿ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು, ಬಿಜೆಪಿ ನಾಯಕರು ಪ್ರತಿಭಟನೆಯ ಹಾದಿ ಹಿಡಿಯುವ ಎಚ್ಚರಿಕೆ ನೀಡಿದ್ದರು. ಈ ನಡುವೆ ಸಿದ್ದರಾಮಯ್ಯ ಅವರ ನಿಲುವಿಗೆ ಟಿಯುಎಫ್ ಬೆಂಬಲ ವ್ಯಕ್ತಪಡಿಸಿದೆ.
ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಶಿ ಮಾತನಾಡಿ, 1964ರ ಕಾಯ್ದೆಯ ಪ್ರಕಾರ ಹಸು-ಕರುಗಳನ್ನು 14 ವರ್ಷದವರೆಗೆ ಹತ್ಯೆ ನಡೆಸುವಂತಿಲ್ಲ. ಈ ಕಾಯ್ದೆಯನ್ನು ಬಿಜೆಪಿ ಸರ್ಕಾರ ತಿದ್ದುಪಡಿ ತರಲು ಪ್ರಯತ್ನಿಸಿತ್ತು. ಆದರೆ, ಇದರಿಂದ ಜಾನುವಾರುಗಳನ್ನು ಸಾಕುವ ರೈತರಿಗೆ, ಪಶುಪಾಲಕರಿಗೆ ಯಾವುದೇ ಉಪಯೋಗವಾಗುವುದಿಲ್ಲ. ಗೋಹತ್ಯೆ ನಿಷೇಧ ನಿರ್ಧಾರವನ್ನು ಕೈಬಿಡುತ್ತಿರುವುದು ಸಮಂಜಸವಾಗಿದೆ ಎಂದರು.
ಬೆಳಗಾವಿನಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ತಿದ್ದುಪಡಿ ಸಹಿತ ಅಂಗೀಕರಿಸಿತ್ತು. ಆದರೆ, ಇದು ಈಗ ರಾಜ್ಯಪಾಲರ ಅನುಮತಿಗಾಗಿ ಕಾದಿದೆ. ರಾಜ್ಯಪಾಲರಿಗೆ ಕಾನೂನಿನ ಬಗ್ಗೆ ಅಪಾರವಾದ ಜ್ಞಾನವಿದೆ. ಹೀಗಾಗಿ ಅವರು ಅವರು ಗೋಹತ್ಯೆ ನಿಷೇಧ ಮಸೂದೆಯನ್ನು ಏಕಾಏಕಿ ಅಂಗೀಕರಿಸದೆ ಮಸೂದೆಯ ಸಂಪೂರ್ಣ ವಿವರಣೆಯನ್ನು ರಾಷ್ಟ್ರಪತಿಗಳ ಗಮನಕ್ಕೆ ಕಳುಹಿಸಿದ್ದರು.
ರಾಷ್ಟ್ರಪತಿಗಳು ಗೋಹತ್ಯೆ ನಿಷೇಧದ ಮಸೂದೆಯನ್ನು ತಾಂತ್ರಿಕ ಕಾರಣಗಳಿಂದ ತಡೆ ಹಿಡಿದು ರಾಜ್ಯ ಸರ್ಕಾರಕ್ಕೆ ಮರು ಪರಿಶೀಲಿಸುವಂತೆ ತಿಳಿಸಿತ್ತು. ರಾಜ್ಯ ಸರ್ಕಾರ ಮಸೂದೆಯನ್ನು ಮರು ಪರಿಶೀಲಿಸಿ ಅಂಗೀಕಾರಕ್ಕಾಗಿ ರಾಜ್ಯಪಾಲರ ಮುಂದಿಟ್ಟಿದೆ. ನೂತನ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಜಾರಿಯಾಗದಂತೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಟಿಪ್ಪು ಸುಲ್ತಾನ್ ಸಂಯುಕ್ತ ರಂಗ(ಟಿಯುಎಫ್) ಜೊತೆಗೆ ಬೆಂಗಳೂರು ಕೋಮು ಸೌಹಾರ್ದ ವೇದಿಕೆ ಮಾನವ ಹಕ್ಕುಗಳ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
'ರೋಗಗ್ರಸ್ತ ಹಾಗೂ ಬಡಕಲು ಗೋವುಗಳನ್ನು ಮಾತ್ರ ಕಡಿಯಬೇಕು. ಚೆನ್ನಾಗಿರುವ, ಆರೋಗ್ಯವಂತ ದೈನಂದಿನ ಬದುಕಿಗೆ ಆಧಾರವಾಗಿರುವ ರಾಸುಗಳನ್ನು ಮುಟ್ಟಬಾರದು ಎನ್ನುವ 1964ರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಯಾಗಬೇಕು' ಎಂದು ರಾಮಾ ಜೋಯಿಸ್ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications