ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಸವಾಲ್

ಕಾಂಗ್ರೆಸ್ ಅಭ್ಯರ್ಥಿ ಕೆ ವೆಂಕಟೇಶ್ ಪರ ಮತಯಾಚಿಸಲು ಚುನಾವಣಾ ಪ್ರಚಾರಕ್ಕಾಗಿ ಇಂದು ಪಿರಿಯಾಪಟ್ಟಣಕ್ಕೆ ಭೇಟಿ ನೀಡುವ ಮುನ್ನವೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗದೇ ಇದ್ದುದಕ್ಕೆ ತಮ್ಮದೇ ಶೈಲಿಯಲ್ಲಿ ಕಟಕಿಯಾಡಿದ್ದ ಕುಮಾರಸ್ವಾಮಿ ಅವರು 'ಕಾಂಗ್ರೆಸ್ಸಿನಲ್ಲಿ ಹಿರಿಯ, ನಿಷ್ಟಾವಂತ ದಲಿತ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದನ್ನು ಆ ಪಕ್ಷದ ಮುಖಂಡರೇ ವ್ಯವಸ್ಥಿತವಾಗಿ ತಡೆದರು' ಎಂದು ಚುಚ್ಚಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಅವರು ಯಾರೋ ಹೇಳಿದರು ಅಂತ ಈಗ ಮುಖ್ಯಮಂತ್ರಿಯನ್ನು ಬದಲಿಸಲಾಗೊಲ್ಲ. ಆದರೆ ಕುಮಾರಸ್ವಾಮಿ ಅವರಿಗೆ ಇನ್ನೂ ಸದವಕಾಶ ಇದೆ. 14ನೇ ವಿಧಾನಸಭೆಯ ಪ್ರತಿಪಕ್ಷದ ನಾಯಕ ಯಾರು ಎಂಬೋದು ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಪ್ರತಿಪಕ್ಷದ ನಾಯಕ ಯಾರು ಎಂಬುದನ್ನು ಕುಮಾರಸ್ವಾಮಿ ಅವರು ನಿರ್ಧರಿಸಬಹುದು. ಹಾಗಾದಲ್ಲಿ, ಅವರೇ ಹೇಳುವಂತೆ ಪ್ರತಿಪಕ್ಷದ ನಾಯಕ ಸ್ಥಾನವನ್ನು ದಲಿತರಿಗೆ ನೀಡಲಿ ಎಂದು ಸಿದ್ದು ಆಶಿಸಿದ್ದಾರೆ.
ತಾಜಾ ಸುದ್ದಿಯ ಪ್ರಕಾರ ಕುಮಾರಸ್ವಾಮಿ ಅವರು JDS ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಕುಮಾರಸ್ವಾಮಿ ಆದೇಶಕ್ಕೆ ಸಿದ್ದು ಮನ್ನಣೆ:
ಈ ಮಧ್ಯೆ ಕುಮಾರಸ್ವಾಮಿ ಅವರು 'ಮದ್ಯದ ದೊರೆಗಳು ಚುನಾವಣಾ ವೆಚ್ಚಕ್ಕೆ ಹಣದ ಹೊಳೆ ಹರಿಸಿದ್ದರಿಂದ ಅಗ್ಗದ ದರದಲ್ಲಿ ಮದ್ಯ ಮಾರಾಟ ಮಾಡಲು ಸರಕಾರ ಮುಂದಾಗಿದೆ. ಇದು ಸರಕಾರದ ಜನವಿರೋಧಿ ನೀತಿಯನ್ನು ಎತ್ತಿತೋರಿಸುತ್ತದೆ' ಎಂದು ಆರೋಪಿಸಿರುವುದು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿವಿಗೆ ತಾಗಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಸಾರಾಯಿ ನಿಷೇಧವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.












Click it and Unblock the Notifications