ಸಂಜೆ ಮಳೆ ಬಂದಾಗ ಬೆಂಗಳೂರಿನ ಸಹಜ ಸ್ಟೋರಿ

ಬೆಂಗಳೂರು, ಮೇ. 20 : ಹನಿಹನಿ ನೀರಿಗೂ ಬಾಯಿಬಿಡುತ್ತಿರುವ ಬೆಂಗಳೂರಿನ ಆಗಸದ ತುಂಬ ಕಪ್ಪಡರಿದ ಮಳೆ ಮೋಡಗಳು... ಇನ್ನೇನು ಮಳೆ ಸುರಿದೇಬಿಟ್ಟಿತು ಅನ್ನುವಾಗ ಅದೆಲ್ಲಿಂದ ಆವರಿಸಿದನೋ ವಾಯುದೇವ? ಮಳೆ ಮೋಡಗಳನ್ನು ಕಿಡ್ನಾಪ್ ಮಾಡಿಕೊಂಡು ಹೋಗುವ ಮುನ್ನ ಬೆವರಿನ ಹನಿಗಳನ್ನು ಸುರಿಸಿ ಹೋಗಿದ್ದಾನೆ. ಹನಿಹನಿ ಬೀಳುತ್ತ ಆಟವಾಡಿಸುತ್ತಿದ್ದ ಮಳೆ ಸಂಜೆ 6 ಗಂಟೆ ಸುಮಾರಿಗೆ ಆರ್ಭಟ ಆರಂಭಿಸಿದೆ.

ಇದು ಜಯನಗರದಲ್ಲಿ ಕಂಡುಬಂದ ದೃಶ್ಯವಾದರೆ ನಗರದ ಹಲವೆಡೆಗಳಲ್ಲಿ ಗುಡುಗು ಮಿಂಚಿನ ಸಮೇತ ಆಲಿಕಲ್ಲು ಮಳೆ ಸುರಿದು ಜನರಲ್ಲಿ ಸಂತಸದ ಅಲೆಯನ್ನು ಎಬ್ಬಿಸಿದೆ. ನೆಂದು ಹೋದರೂ ಪರವಾಗಿಲ್ಲ ಮಳೆ ಬಂತಲ್ಲ ಎಂದು ನಿಟ್ಟುಸಿರುಬಿಡುತ್ತಿದ್ದಾರೆ. ಹಲವೆಡೆ ಬುಡಸಡಿಲು ಮಾಡಿಕೊಂಡಿದ್ದ ಮರಗಳು ಬೀಸಿದ ಬಲವಾದ ಗಾಳಿಗೆ ಬುಡಮೇಲಾಗಿ ಧರೆಗೆ ಒರಗಿವೆ. ಮೆಜೆಸ್ಟಿಕ್, ಮಲ್ಲೇಶ್ವರ, ಎಂಜಿ ರಸ್ತೆ, ರಾಜಾಜಿನಗರದಲ್ಲಿ ಸುರಿದ ಮುಂಗಾರು ಮುಂಚಿನ ಮಳೆಗೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

ಎಂಟು ದಿನಕ್ಕೊಮ್ಮೆ ಬರುತ್ತಿರುವ ಕಾವೇರಿ ನೀರನ್ನು ನೆಚ್ಚಿಕೂಡುವುದು ಸಾಧ್ಯವಿಲ್ಲವೆಂದು ಕಾದುಕುಳಿತಿರುವ ಬೆಂಗಳೂರಿನ ಹಲವಾರು ಬಡಾವಣೆಯ ಜನರು, ಇಂಥ ಮಳೆ ಸುರಿದಾಗ ಚೊಂಬು, ಬಕೇಟುಗಳನ್ನು ಹಿಡಿದಿಡುವ ಸ್ಥಿತಿಗೆ ತಲುಪಿದ್ದಾರೆ. ಒಂದಿಷ್ಟು ಮಳೆ ಬಿದ್ದು ಬೋರ್ ವೆಲ್ ನಲ್ಲಿ ಒಂದು ನೀರು ಹರಿದುಬಂದರೆ ಸಾಕು ಎಂಬ ಸ್ಥಿತಿಗೂ ತಲುಪಿದ್ದಾರೆ. ನೀರಿನ ಟ್ಯಾಂಕರಿಗಳಿಗಂತೂ ಭಾರೀ ಬೇಡಿಕೆ ಹೆಚ್ಚಿದೆ, ಹಾಗೆಯೆ ಟ್ಯಾಂಕರ್ ದರಗಳು ಕೂಡ ಹೆಚ್ಚಿವೆ.

Bangalore rain evening stories

ಮುಂಗಾರು ನಿಖರವಾಗಿ ಎಂದು ಬರುತ್ತೋ? ಒಬ್ಬೊಬ್ಬ ಹವಾಮಾನ ತಜ್ಞರು ಒಂದೊಂದು ದಿನಾಂಕಗಳನ್ನು ಹೇಳುತ್ತಿದ್ದಾರೆ. ಒಬ್ಬರು ಒಂದು ವಾರ ತಡವಾಗಿ ಆಗಮಿಸುತ್ತದೆ ಎಂದು ಹೇಳಿದ್ದರೆ, ಮತ್ತೊಬ್ಬರು ಮುಂಗಾರು ಮಳೆ ಅವಧಿಗೆ ಮುಂಚೆಯೇ ಕರ್ನಾಟಕದ ಕರಾವಳಿ ತೀರವನ್ನು ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಯಾವುದು ಸರಿಯೋ ಯಾವುದು ತಪ್ಪೋ ಒಟ್ಟಿನಲ್ಲಿ ರಾಜ್ಯಾದ್ಯಂತ ಸರಿಯಾಗಿ ಮಳೆಯಾದರೆ ಸಾಕು.

ಮುಂಗಾರಿನ ಮುನ್ಸೂಚನೆ ನೀಡಿರುವ ಮಳೆಹನಿಗಳು ಎಲ್ಲೆಲ್ಲೂ ಮಣ್ಣಿನ ಘಮಲನ್ನು ಹಬ್ಬಿಸಿವೆ. ಫೇಸ್ ಬುಕ್ಕಿನಲ್ಲಿ 'ಥಟ್ ಅಂತ ಹೇಳಿ' ಖ್ಯಾತಿಯ ಡಾ. ಎನ್ ಸೋಮೇಶ್ವರ್ ಅವರು 'ಇಳೆಯ ಘಮಲು' ಎಂಬ ಶೀರ್ಷಿಕೆಯಡಿ ವಿಚಿತ್ರವಾಗಿ ಹರಡುವ ವಾಸನೆಯ ವ್ಯಾಖ್ಯಾನ ನೀಡಿದ್ದಾರೆ. ಹಿಂದೆ 2005ರಲ್ಲಿ ಶ್ರೀವತ್ಸ ಜೋಶಿ ಅವರು ತಮ್ಮ 'ವಿಚಿತ್ರಾನ್ನ' ಕಾಲಂನಲ್ಲಿ 'ಮಣ್ಣಿನ ವಾಸನೆಯ ಹಿತಾನುಭವ' ಲೇಖನ ಬರೆದಿದ್ದರು. ಇಲ್ಲಿದೆ ಓದಿರಿ.

ಬಂದಾಗ ಹಲವರಿಗೆ 'ಸುಖವನ್ನು' ನೀಡುವ ಮತ್ತು ಬಂದೆ ಬಂದೆ ಅನ್ನುತ್ತಲೇ ಬರದೆ ಆಟವಾಡಿಸುವ ಈ ಮಳೆ ಮೇಲೋ ಫೀಮೇಲೋ ಎಂಬ ವಿಷಯವೂ ಸಾಕಷ್ಟು ಜಿಜ್ಞಾಸೆಗೆ ಕಾರಣವಾಗಿದೆ. ಈ ವಿಷಯ ಕುರಿತು ಸಾಕಷ್ಟು ತಲೆಕೆಡಿಸಿಕೊಳ್ಳದೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಗಗನಸಖಿಯವರು ಝುಳಝುಳನೆ ಹರಿಯಬಿಟ್ಟಿದ್ದಾರೆ. ಅನುಭವಿಸಿರುವ ನೀವೇ ಹೇಳಿ ಮಳೆ ಮೇಲೋ ಫೀಮೇಲೋ.

ಥೂ ನನ್ಮಗಂದು ಈ ಬಿಸಿಲಲ್ಲಿ ಯಾವೋನು ಜರ್ಕಿನ್ ಹಾಕ್ಕೊಂಡು ಹೋಗ್ತಾನೆ ಎಂದು ಉದಾಸೀನ ಮಾಡಿದ ದ್ವಿಚಕ್ರ ವಾಹನ ಚಾಲಕರು ಸಂಜೆಯ ಮಳೆಗೆ ಸಿಲುಕಿ ಪಡಬಾರದು ಸಂಕಷ್ಟ ಪಡುತ್ತಿದ್ದಾರೆ. ಮಳೆ ಬಂದೇ ಬರುತ್ತದೆಂದು ಮೊದಲೇ ಊಹಿಸಿ ಲಗುಬಗನೆ ಮನೆ ಸೇರಿದವರು ಹೆಂಡತಿ ಕೈಯಿಂದ ಕಾಂದಾ ಬಜಿ ಮಾಡಿಸಿಕೊಂಡು ಆನಂದಿಸುತ್ತಿರುತ್ತಾರೆ. ಕೆಲವರಿಗೆ ಸಂತಸ, ಹಲವರಿಗೆ ಸಂಕಟ.

ಬೆಂಗಳೂರಲ್ಲಿ ಧಾರಾಕಾರ ಮಳೆ, ಅಲ್ಲಲ್ಲಿ ಬಿದ್ದ ಆಲಿಕಲ್ಲುಗಳು, ಬಲವಾಗಿ ಬೀಸಿದ ಗಾಳಿಗೆ ಉರುಳಿದ ಮರಗಳು, ಮೋರಿ ನೀರೆಲ್ಲ ರಸ್ತೆಗೆ ನುಗ್ಗಿ ಸಂಚಾರ ಅಸ್ತವ್ಯಸ್ತ, ಬಸ್ಸಿಗಾಗಿ ಕಾದುನಿಂತ ಸಾರ್ವಜನಿಕರ ಪರದಾಟ, ತಗ್ಗು ಪ್ರದೇಶಗಳಿಗೆ ನೀರುನುಗ್ಗಿ ಜನಜೀವನ ಅಸ್ತವ್ಯಸ್ತ, ಸಹಾಯಕ್ಕೆ ಬಾರದ ಬಿಬಿಎಂಪಿ ಅಧಿಕಾರಿಗಳಿಗೆ ಜನರ ಹಿಡಿಶಾಪ... ಸಂಜೆ ಮಳೆ ಬಂದಾಗ ಬೆಂಗಳೂರಿನ ಸಹಜ ಸ್ಟೋರಿಗಳಿವು.

ಅಂದ ಹಾಗೆ, ಮುಂಗಾರು ಶುರುವಾದರೆ ಎದುರಾಗಬಹುದಾಗ ತೊಂದರೆಗಳನ್ನು ಎದುರಿಸಲು ನಮ್ಮ ಬಿಬಿಎಂಪಿ ಸಿದ್ಧವಾಗಿದೆಯಾ? ನಿಮ್ಮ ಉತ್ತರವೇನು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+