ಲಿವಿಂಗ್ ಟುಗೆದರ್ ಸಂಬಂಧ : ಯುವತಿ ನೇಣಿಗೆ

ಬುಧವಾರ ರಾತ್ರಿ ಆಯೇಷಾ (25) ದುಪ್ಪಟದಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ನೇಹಿತ ಶ್ರೀಧರ್ ಜೊತೆ ವಾಸಿಸುತ್ತಿದ್ದ ಈಕೆ ಆತ್ಮಹತ್ಯೆ ಮಾಡಿಕೊಳ್ಳುವಾಗ ಮೂರು ತಿಂಗಳ ಗರ್ಭಿಣಿಯಾಗಿದ್ದಳು ಎಂದು ವರ್ತೂರು ಪೊಲೀಸರು ತಿಳಿಸಿದ್ದಾರೆ.
ಶ್ರೀಧರ್ ಜೊತೆ ಲಿವಿಂಗ್ ಟುಗೆದರ್ ಸಂಬಂಧವಿಟ್ಟುಕೊಂಡಿದ್ದ ಆಯೇಷಾ ಆತ್ಮಹತ್ಯೆ ಮಾಡಿಕೊಂಡಿರುವುದು ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರೇಮ ಪುರಾಣ : ಆಯೇಷಾ ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆಯವಳು ಆರು ವರ್ಷಗಳಹಿಂದೆ ತಂದೆ-ತಾಯಿಯೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆಗೆ ಜಿಮ್ ನಲ್ಲಿ ಶ್ರೀಧರ್ ಪರಿಚಯವಾಗಿದ್ದಾರೆ.
ಪರಿಚಯ ಪ್ರೀತಿಗೆ ತಿರುಗಿದ್ದು, ಇಬ್ಬರೂ ವಿವಾಹವಾಗುವ ಬಗ್ಗೆ ಮನೆಯಲ್ಲಿ ವಿಷಯ ತಿಳಿಸಿದ್ದರು. ಆಯೇಷಾ ತಂದೆ-ತಾಯಿ ವೈಟ್‌ಫೀಲ್ಡ್ ನಲ್ಲಿ ನೆಲಸಿದ್ದು, ಈಕೆ 2012ರಿಂದ ಕಂಪನಿಗೆ ಓಡಾಡಲು ದೂರವಾಗುತ್ತದೆ ಎಂದು ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.
ಮೃತ ಆಯೇಷಾ ಸ್ನೇಹಿತ ಶ್ರೀಧರ್ ಪ್ರಕಾರ 2012ರ ಜನವರಿಯಿಂದ ಇಬ್ಬರೂ ಜೊತೆಯಲ್ಲಿ ವಾಸಿಸುತ್ತಿದ್ದರು. ಆದರೆ, ಈ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿರಲಿಲ್ಲ. ಕೆಲಸಕ್ಕೆ ಹೋಗುವ ವಿಷಯದ ಬಗ್ಗೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಪೊಲೀಸರಿಗೆ ಶ್ರೀಧರ್ ಹೇಳಿದ್ದಾನೆ.
ಮಂಗಳವಾರವೂ ಕೆಲಸದ ವಿಷಯವಾಗಿ ಚರ್ಚೆಯಾಗಿದೆ. ನಂತರ ಆಯೇಷಾಗೆ ಕೆಲಸಕ್ಕೆ ಹೋಗದೆ ಮನೆಯಲ್ಲಿರಲು ಶ್ರೀಧರ್ ಸೂಚಿಸಿದ್ದಾನೆ. ಇದಕ್ಕೆ ಒಪ್ಪಿದ ಆಕೆ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮ್ಮ ಮಗಳ ಸಾವಿಗೆ ಶ್ರೀಧರ್ ಕಾರಣ. ಆಕೆಯನ್ನು ಶ್ರೀಧರ್ ಕೊಲೆ ಮಾಡಿದ್ದಾರೆ ಎಂದು ಆಯೇಷಾ ತಾಯಿ ಆರೋಪಿಸಿದ್ದಾರೆ.
ಮತಾಂತರ : ಮೃತ ಆಯೇಷಾ ಅವರ ಗುರುತಿನ ಚೀಟಿ ಮನೆಯಲ್ಲಿ ಪತ್ತೆಯಾಗಿದ್ದು, ಅದರಲ್ಲಿ ತೇಜಸ್ವಿನಿ ಎಂಬ ಹೆಸರಿದೆ. ಅದೇ ಹೆಸರಿನಲ್ಲಿ ಆಕೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಆದ್ದರಿಂದ, ಆಕೆ ಮತಾಂತರಗೊಂಡಿದ್ದರೇ ಎಂಬ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಹ ನಟಿ : ಮೃತ ಆಯೇಷಾ ಐಶ್ವರ್ಯಾ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪ್ರಕರಣದಲ್ಲಿ ಹಲವು ಗೊಂದಲಗಳಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications