ಡಿಸಿಎಂ ಹುದ್ದೆ ಸೃಷ್ಟಿ ಸಾಧ್ಯತೆ ಇಲ್ಲ : ಆಸ್ಕರ್

ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಆಯ್ಕೆ ಮಾಡಿರುವ ಎಲ್ಲಾ 121 ಮಂದಿ ಶಾಸಕರು ಕೂಡ ಸಚಿವ ಸ್ಥಾನಕ್ಕೆ ಯೋಗ್ಯರಾಗಿದ್ದಾರೆ. ಹೀಗಾಗಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಸಹಜ, ಸಚಿವ ಸ್ಥಾನಕ್ಕಾಗಿ ಯಾವುದೇ ಒತ್ತಡಗಳಿಲ್ಲ.ಲಾಬಿ ಯಾರು ನಡೆಸಿಲ್ಲ. ಹೈಕಮಾಂಡ್ ಯೋಗ್ಯ ವ್ಯಕ್ತಿಗಳಿಗೆ ಅವಕಾಶ ನೀಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಹೇಳಿದರು.
ಡಿಸಿಎಂ ಹುದ್ದೆ ಸೃಷ್ಟಿ: ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಸಂತಸದಿಂದ ಒಪ್ಪಿಗೆ ಸೂಚಿಸಿದ ಮೇಲೆ ಗಾಳಿಸುದ್ದಿ ಹಬ್ಬಿತ್ತು. ಎರಡು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಗೆ ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆಯಂತೆ. ಲಿಂಗಾಯತ ಸಮುದಾಯ ಹಾಗೂ ದಲಿತರನ್ನು ಓಲೈಸಲು ಈ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿತ್ತು.
ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿ ಸಾಧ್ಯವೇ ಇಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಾಖಂಡಿತವಾಗಿ ಹೇಳಿದ್ದರು. ಈಗ ಇದೇ ಮಾತನ್ನು ಆಸ್ಕರ್ ಅವರು ಕರಾವಳಿಯಲ್ಲಿ ಮತ್ತೊಮ್ಮೆ ಹೇಳಿದ್ದಾರೆ.
ಮೇ.5 ರಂದು ನಡೆದ ಚುನಾವಣೆಯ ಫಲಿತಾಂಶ ಮೇ 8 ರಂದು ಹೊರಬಿದ್ದಿತ್ತು. ಜನಾದೇಶದ ಪ್ರಕಾರ 223 ಸೀಟುಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ 121 ಸೀಟುಗಳ ಬಹುಮತ ಲಭಿಸಿತ್ತು. ಸುಮಾರು 9 ವರ್ಷಗಳ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಗದ್ದುಗೆ ಹಿಡಿಯುತ್ತಿರುವ ಸಂಭ್ರಮದಲ್ಲಿದೆ.
ಸಂಪುಟ ವಿಸ್ತರಣೆ ಬಗ್ಗೆ: ಮುಖ್ಯಮಂತ್ರಿಗಳು ನಾಳೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಎಲ್ಲ ನಿರ್ಧಾರಗಳನ್ನು ತೆಗೆದು ಕೊಳ್ಳಲಿದ್ದಾರೆ. ನಮ್ಮಲ್ಲಿ ಯಾವುದೇ ಆತುರ ಇಲ್ಲ. ಉತ್ತಮ ರೀತಿಯ ಆಡಳಿತ ನೀಡುವುದು ನಮ್ಮ ಉದ್ದೇಶ ವಾಗಿದೆ ಎಂದು ಆಸ್ಕರ್ ತಿಳಿಸಿದರು.
ಖರ್ಗೆಯವರಿಗೆ ಮುಂದೆ ಕೇಂದ್ರ ಸಚಿವ ಸಂಪುಟದ ಪುನಾರಚನೆಯ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ಸಿಗಬಹುದು. ಪಕ್ಷದ ನಿರ್ಧಾರದಂತೆ ಚುನಾಯಿತ ಪ್ರತಿನಿಧಿಗಳು ಮುಖ್ಯ ಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ ಇದರಲ್ಲಿ ಯಾವುದೇ ಗೊಂದಲ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications