ಕಲ್ಲಡ್ಕ ಭಟ್ ಶಾಲೆ ಮೇಲೆ ನಡೆದಿದ್ದು ದಾಳಿಯಲ್ಲ

ಅರಣ್ಯ ಇಲಾಖೆ ಅಧಿಕಾರಿಗಳು ಶ್ರೀರಾಮ ವಿದ್ಯಾ ಕೇಂದ್ರದ ಮೇಲೆ ಅಂತಹ ಯಾವುದೇ ದಾಳಿಯನ್ನು ನಡೆಸಿಲ್ಲ. ಆದರೆ ಗಾಯಗೊಂಡ ಪ್ರಾಣಿಗಳಿಗೆ ಶಾಲೆಯಲ್ಲಿ ಚಿಕಿತ್ಸೆ ನೀಡಿ ಪೋಷಣೆ ಮಾಡುವ ಪರಿಪಾಠವಿದೆ. ಒಮ್ಮೆ ಅಂತಹ ಪ್ರಾಣಿಗಳು ಗುಣಮುಖಗೊಂಡು, ಆರೈಕೆ ಮುಗಿದ ಬಳಿಕ ಅದನ್ನು ಸರಕಾರಕ್ಕೆ ಒಪ್ಪಿಸಲಾಗುತ್ತದೆ. ಹಾಗಾಗಿ ಶಾಲೆಯ ಆಡಳಿತ ಮಂಡಳಿ ಅಂತಹ ಪ್ರಾಣಿಗಳನ್ನು ನಿನ್ನೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಮತ್ತು ಅವುಗಳನ್ನು ಇಲಾಖೆಯ ಸಿಬ್ಬಂದಿ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಸುಪರ್ದಿಗೆ ಒಪ್ಪಿಸಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿ ಪದ್ಮನಾಭ ಗೌಡ ಸ್ಪಷ್ಟನೆ ನೀಡಿದ್ದಾರೆ.
ಹಿಂದಿನ ಸುದ್ದಿ: ಸ್ಥಳೀಯ ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶ್ರೀರಾಮ ವಿದ್ಯಾ ಕೇಂದ್ರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿಯಿಟ್ಟಿದ್ದಾರೆ.
ಸದರಿ ವಿದ್ಯಾ ಕೇಂದ್ರದಲ್ಲಿ ಕಾನೂನುಬಾಹಿರವಾಗಿ ವನ್ಯಜೀವಿಗಳನ್ನು ಸಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕರು.
ಬಂಟ್ವಾಳ ಕಾಂಗ್ರೆಸ್ ಶಾಸಕ ರಮಾನಾಥ ರೈ ಅವರ ಜತೆ ಬಹಳ ಹಿಂದಿನಿಂದಲೂ ಪ್ರಭಾಕರ್ ಭಟ್ ಅವರು ವೈಷಮ್ಯ ಬೆಳೆಸಿಕೊಂಡು ಬಂದಿದ್ದಾರೆ. ಭಟ್ ಅವರು ದಕ್ಷಿಣ ಮತ್ತು ಉತ್ತರ ಭಾಗಗಳ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾದೇಶಿಕ ಪ್ರಮುಖ್ ಆಗಿದ್ದಾರೆ.
ವನ್ಯ ಮೃಗಗಳಾದ ಮಂಗಗಳು, ಸಾರಂಗಗಳು, ಜಿಂಕೆಗಳು, ಮುಳ್ಳುಹಂದಿ, ನವಿಲುಗಳು, ಮೊಲ ಮುಂತಾದವುಗಳನ್ನು ಶಾಲಾ ಕೇಂದ್ರದಲ್ಲಿ ನಾಲ್ಕೈದು ವರ್ಷಗಳಿಂದ ಪರವಾನಗಿ ಇಲ್ಲದೆ ಸಾಕಲಾಗುತ್ತು ಎನ್ನಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ತಂಡವು ಪ್ರಾಣಿಗಳನ್ನು ವಶಕ್ಕೆ ತೆಗೆದುಕೊಂಡು ಶಾಲಾ ಆಡಳಿತ ಮಂಡಳಿಯ ಮೇಲೆ ವನ್ಯಜೀವಿ ಸಂರಕ್ಷಣೆ ಕಾಯಿದೆಯಡಿ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಯಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications