ಫಲಿತಾಂಶ : ಯಾವ ನಾಯಕರು ಏನು ಹೇಳಿದರು?
ಬೆಂಗಳೂರು, ಮೇ 8 : ರಾಜ್ಯದ ಜನರ ಕುತೂಹಲ ಕೆರಳಿಸಿದ್ದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಮತದಾರ ಪ್ರಭು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದು ಸ್ಪಷ್ಟ ಬಹುಮತ ನೀಡಿದ್ದಾನೆ. ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದ ರಾಜಕೀಯ ನಾಯಕರು ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ.
ಚುನಾವಣೆ ಫಲಿತಾಂಶದ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ವಿವಿಧ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಜನತೆಯ ತೀರ್ಪನ್ನು ಒಪ್ಪಿಕೊಂಡು ಕಾರ್ಯ ನಿರ್ವಹಿಸುತ್ತೇವೆ ಎಂದು ನಾಯಕರು ತಮಗೆ ತಾವೇ ಸಮಾಧಾನ ಮಾಡಿಕೊಂಡಿದ್ದಾರೆ.
ಜನತೆಯ ತೀರ್ಪು ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಫಲಿತಾಂಶ ಅನಿರೀಕ್ಷಿತವಾಗಿದ್ದು ಆದರೂ ಅದನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದೆ. ಕಾಂಗ್ರೆಸ್ ಗೆಲುವಿನ ಉತ್ಸಾಹದಲ್ಲಿದೆ. ಕಳೆದ ಚುನಾವಣೆಗಿಂತ ಉತ್ತಮ ಸಾಧನೆ ಮಾಡಿದ್ದರೂ ಜೆಡಿಎಸ್ ಅಧಿಕಾರ ಪಡೆಯುವ ಕನಸು ನನಸಾಗಿಲ್ಲ.
ಚುನಾವಣೆ ಫಲಿತಾಂಶ ಪ್ರಕಟವಾದ ತಕ್ಷಣ ವಿವಿಧ ಪಕ್ಷಗಳ ಮುಖಂಡರು ನೀಡಿದ ಪ್ರತಿಕ್ರಿಯೆಗಳು ಇಂತಿವೆ. ತಮ್ಮ ಸೋಲಿಗೆ ತಾವೇ ಕಾರಣ ಎಂದು ಹಲವರು ಹೇಳಿದ್ದರೆ, ಜೆಡಿಎಸ್ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದೆ. ವಿವಿಧ ಪಕ್ಷಗಳ ಪ್ರಮುಖ ನಾಯಕರ ಮಾತನ್ನು ಅವರ ಮಾತಲ್ಲೇ ತಿಳಿಯೋಣ ಬನ್ನಿ.

ಜಗದೀಶ್ ಶೆಟ್ಟರ್
ಜನತೆ ನೀಡಿದ ತೀರ್ಪು ಅನಿರೀಕ್ಷಿತವಾಗಿದೆ. ಜನತೆಯ ತೀರ್ಪಿಗೆ ತಲೆಬಾಗುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ತೀರ್ಪು ಸಹಜ. ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಕರ್ನಾಟಕ ಜನತೆಗೆ ಮತ್ತು ಆಡಳಿತದಲ್ಲಿ ಸಹಕರಿಸಿದ ಅಧಿಕಾರಿಗಳಿಗೆ ನನ್ನ ಧನ್ಯವಾದಗಳು.

ಪರಮೇಶ್ವರ್
ರಾಜ್ಯದ ಜನರು ಬದಲಾವಣೆ ಬಯಸಿದ್ದರು ಎಂಬುದು ಚುನಾವಣೆ ಫಲಿತಾಂಶದಿಂದ ಸಾಬೀತಾಗಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ರಾಜ್ಯದಲ್ಲಿ ಎರಡು ವರ್ಷಗಳಿಂದ ಪಕ್ಷ ಸಂಘಟನೆ ಮಾಡಿರುವುದಕ್ಕೆ ತಕ್ಕ ಪ್ರತಿಫಲ ದೊರಕಿದೆ. ಬೆಂಬಲ ನೀಡಿದ ಜನರಿಗೆ ಧನ್ಯವಾದಗಳು.

ಎಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ ಗೆಲುವಿಗೆ ಮಾಧ್ಯಮಗಳೇ ಕಾರಣ. ವಿನಾಕಾರಣ ಸಮೀಕ್ಷೆಗಳ ಹೆಸರಲ್ಲಿ ಕಾಂಗ್ರೆಸ್ ಪರವಾಗಿ ಪರೋಕ್ಷ ಪ್ರಚಾರ ಮಾಡಿದರು. ಬಿಜೆಪಿ ಪಕ್ಷ ಮಾಡಿದ್ದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಜನತೆ ಮತ ನೀಡಿದ್ದಾರೆ. ಇದು ನನಗೆ ತೀವ್ರ ನಿರಾಸೆ ಉಂಟುಮಾಡಿದೆ.

ಸಿದ್ದರಾಮಯ್ಯ
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇತ್ತು ಎಂಬುದು ಸಾಬೀತಾಗಿದೆ. ವರುಣಾ ಕ್ಷೇತ್ರದಲ್ಲಿ ನನ್ನ ಗೆಲುವು ಮೊದಲೇ ತಿಳಿದಿತ್ತು. ನಿರೀಕ್ಷೆಯಂತೆಯೇ 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಮುಖ್ಯಮಂತ್ರಿ ಹುದ್ದೆಯ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ.

ಡಿ.ಕೆ.ಶಿವಕುಮಾರ್
ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಸರ್ಕಾರ ನೀಡಲಿದೆ. ಮುಖ್ಯಮಂತ್ರಿ ಹುದ್ದೆ ಕುರಿತು ಶಾಸಕರ ಮತ್ತು ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ನಾನು ಪಕ್ಷದ ಏಳಿಗೆಗೆ ಬಹಳ ವರ್ಷಗಳಿಂದ ದುಡಿದಿದ್ದೇನೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆಗೆ ನಾನು ಕೂಡ ಓರ್ವ ಆಕಾಂಕ್ಷಿ.












Click it and Unblock the Notifications