ಮಲ್ಲೇಶ್ವರಂ ಸ್ಪೋಟ : ಇಬ್ಬರ ಶಂಕಿತರ ಬಂಧನ

ಕೊಯಮತ್ತೂರು ನಿವಾಸಿಗಳಾದ ಅಸ್ಗರ್ ಅಲಿ ಹಾಗೂ ವಲೈಯಲ್ ಹಕೀಂ ಬಂಧಿತರು. ಬೆಂಗಳೂರು ಹಾಗೂ ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್‌ಕರ್ ತಿಳಿಸಿದ್ದಾರೆ.
ಸ್ಫೋಟಕ ವಸ್ತುಗಳನ್ನು ಖರೀದಿಸಿ, ಅದನ್ನು ಪೂರೈಸಿರುವ ಶಂಕೆಯ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಶುಕ್ರವಾರ ಕೊಯಮತ್ತೂರು ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿದೆ. ನ್ಯಾಯಾಧೀಶರ ಅನುಮತಿ ನಂತರ ಆರೋಪಿಗಳನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ.
ಬಂಧಿತರವು ಕೆಲವು ಗಂಭೀರ ಪ್ರಕರಣಗಳಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಪೊಲೀಸರಿಗೆ ಬೇಕಾಗಿದ್ದರು ಎಂದು ತಿಳಿದುಬಂದಿದೆ. ಕಾನೂನು ಪ್ರಕಾರವಾಗಿ ಆರೋಪಿಗಳನ್ನು ಕರ್ನಾಟಕದ ಪೊಲೀಸರ ವಶಕ್ಕೆ ತೆಗೆದುಕೊಳ್ಳಲಾಗುವುದು.
ಒಂದು ವೇಳೆ ಚೆನ್ನೈ ಪೊಲೀಸರು ಮೊದಲು ಅವರನ್ನು ವಶಕ್ಕೆ ತೆಗೆದುಕೊಂಡರೆ, ಅವರ ಅವಧಿ ಮುಗಿದ ನಂತರ ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆರೋಪಿಗಳನ್ನು ವಶಕ್ಕೆ ಪಡೆಯತ್ತೇವೆ ಎಂದು ರಾಘವೇಂದ್ರ ಔರಾದ್‌ಕರ್ ತಿಳಿಸಿದರು.
ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಲ್ ಉಮ್ಮಾ ಸಂಘಟನೆಯ ಕಿಚನ್ ಅಲಿಯಾಸ್ ಬುಹಾರಿ, ಬಸೀರ್ ಹಾಗೂ ಪೀರ್ ಮೊಹಿದ್ದೀನ್ ಎಂಬುವರನ್ನು ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ಚುರುಕುಗೊಂಡಿದೆ.
ಬೋಸ್ಟನ್ ನೋಡಿ ಕಲಿಯಿರಿ : ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಬಾಂಬ್ ಸ್ಫೋಟದ ತನಿಖೆಯನ್ನು ನೋಡಿ, ನಮ್ಮ ಪೊಲೀಸರು ಚುರುಕಾಗಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಲ್ಲೇಶ್ವರಂ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒಳಗೊಂಡ ಪ್ರಮಾಣಪತ್ರ ಸಲ್ಲಿಸುವಂತೆ ತನಿಖಾಧಿಕಾರಿಗೆ ನ್ಯಾಯಾಲಯ ಸೂಚನೆ ನೀಡಿದೆ.
ಸ್ಫೋಟ ನಂತರದ ಟಿವಿ ದೃಶ್ಯಾವಳಿಯನ್ನು ನೋಡಿದರೆ, ಜನರೆಲ್ಲ ಅದೇ ಸ್ಥಳದಲ್ಲಿ ಓಡಾಡುತ್ತಿದ್ದಾರೆ. ಅದನ್ನು ತನಿಖೆ ಎಂದು ಕರೆಯಬೇಕಾ? ಯಾವ ರೀತಿಯ ತನಿಖೆ ಅದು?. ಒಬ್ಬ ಪೇದೆ ತನ್ನ ಲಾಠಿಯಲ್ಲಿ ಏನನ್ನೋ ಕೆದಕುತ್ತಿರುವುದು ಕಂಡುಬರುತ್ತದೆ.
ಮಹತ್ವದ ಸಾಕ್ಷ್ಯ ಅಥವಾ ಸುಳಿವನ್ನು ಇಂತಹ ಸಂದರ್ಭದಲ್ಲಿ ನಾವು ಕಳೆದುಕೊಳ್ಳುತ್ತೇವೆ. ಬೋಸ್ಟನ್ ನಲ್ಲಿ ಸ್ಫೋಟದ ನಂತರ ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದು, ಯಾರನ್ನೂ ಬಿಡದೆ ತನಿಖೆ ನಡೆಸಿದರು ಎಂದು ನ್ಯಾ.ರಾಮಮೋಹನ್ ರೆಡ್ಡಿ ಅವರಿದ್ದ ನ್ಯಾಯಪೀಠ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿತು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications