ಕೊರಟಗೆರೆಯಲ್ಲಿ ಪರಮೇಶ್ವರ್ ಹಾದಿ ಸುಗಮವೇ?

ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಪರಮೇಶ್ವರ್ ಕ್ಷೇತ್ರ ಪುನರ್ ವಿಂಗಡನೆಯ ನಂತರ ಕೊರಟಗೆರೆ ಕ್ಷೇತ್ರಕ್ಕೆ ಬಂದರು. ಮೂರು ಬಾರಿ ಮಧುಗಿರಿಯಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದ ಪರಮೇಶ್ವರ್, 2008ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದಲೂ ಗೆದ್ದು ಬಂದಿದ್ದರು.
ರೇಷ್ಮೆ ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ನಿರ್ವಹಿಸಿ ಅನುಭವ ಹೊಂದಿರುವ ಇವರು ಸದ್ಯ ರಾಜ್ಯ ಕಾಂಗ್ರೆಸ್ ಸಾರಥಿ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಆಧಿಕಾರ ಹಿಡಿದರೆ ಮುಖ್ಯಮಂತ್ರಿ ಆದರೂ ಆಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಾತಿ ಲೆಕ್ಕಾಚಾರಗಳು : ಒಕ್ಕಲಿಗರು, ಲಿಂಗಾಯತರು ಹಾಗೂ ಪರಿಶಿಷ್ಟ ಜಾತಿಯ ಮತಗಳು ಕೊರಟಗೆರೆ ಕ್ಷೇತ್ರದ ಅಭ್ಯರ್ಥಿ ಗೆಲುವನ್ನು ನಿರ್ಧರಿಸಲಿವೆ. ಪರಮೇಶ್ವರ್ ಗೆ ಜಾತಿ ಬಲ ಕೈ ಹಿಡಿಯುವುದು ಕಡಿಮೆ. ಆದರೆ, ಎಲ್ಲಾ ಜಾತಿಗಳ ಮತಗಳನ್ನು ಸೆಳೆಯುವ ಶಕ್ತಿ ಇದೆ.
ಕೆಪಿಸಿಸಿ ಅಧ್ಯಕ್ಷ, ಕಳೆದ ಚುನಾವಣೆಯ ಗೆಲುವು, ಭಾವೀ ಮುಖ್ಯಮಂತ್ರಿ ಎಂಬ ಅಂಶಗಳು ಪರಮೇಶ್ವರ್ ಅವರನ್ನು ಗೆಲುವಿನತ್ತ ಕರೆದುಕೊಂಡು ಹೋಗಬಹುದಾಗಿದೆ. ಆದರೆ, ಕ್ಷೇತ್ರದಲ್ಲಿ ಪರಮೇಶ್ವರ್ ಕೆಲಸ ಮಾಡಿಲ್ಲ ಎಂಬ ಆರೋಪವಿದ್ದು, ಇದು ವಿರೋಧಿಗಳಿಗೆ ಪ್ಲಸ್ ಪಾಯಿಂಟ್ ಆದರೆ ಗೆಲುವು ಕಷ್ಟ..ಕಷ್ಟ.
ಕೆಜೆಪಿಯಿಂದ ವಾಲೆ ಚಂದ್ರಯ್ಯ ಪ್ರಮೇಶ್ವರ್ ವಿರುದ್ಧ ತೊಡೆ ತಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಪರಮೇಶ್ವರ್ ವಿರುದ್ದ 12,500 ಮತಗಳಿಂದ ಸೋಲುಂಡಿದ್ದ ವಾಲೆ ಚಂದ್ರಯ್ಯ ಈ ಬಾರಿ ಕೆಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
ಜೆಡಿಎಸ್ ನಿಂದ ಪಿ.ಸುಧಾಕರ್ ಲಾಲ್ ಅಭ್ಯರ್ಥಿ. ಮೂರು ಬಾರಿ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿರುವ ಇವರು ಪ್ರಥಮಬಾರಿಗೆ ಪರಮೇಶ್ವರ್ ವಿರುದ್ಧ ಅಖಾಡಕ್ಕೆ ಧುಮುಕಿದ್ದಾರೆ. ಈ ಉಭಯ ನಾಯಕರು ಸ್ಥಳೀಯರು ಎಂಬುದು ಇವರ ಪ್ಲಸ್ ಪಾಯಿಂಟ್.
ಬಿಜೆಪಿ ಅಭ್ಯರ್ಥಿ ಪೆದ್ದರಾಜು ಮತ್ತು ಬಿಎಸ್ಆರ್ ಕಾಂಗ್ರೆಸ್ ನ ಆಂಜನೇಯ ಅವರು ತೀವ್ರ ಪೈಪೋಟಿ ನೀಡದಿದ್ದರೂ, ಮತ ಗಳನ್ನು ಸೆಳೆದು ಗೆಲುವಿನ ಅಂತರ ಕಡಿಮೆ ಮಾಡುವಷ್ಟು ಶಕ್ತಿ ಹೊಂದಿದ್ದಾರೆ. ಕ್ಷೇತ್ರದ ಹಣಾಹಣಿ ಕೆಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ.
ಮತದಾರರು : ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,76,268. ಕೆಜೆಪಿ ಅಭ್ಯರ್ಥಿ ವಾಲೆ ಚಂದ್ರಯ್ಯ ಲಿಂಗಾಯತ ಮತಗಳ ಮೇಲೆ ಕಣ್ಣೀಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ಪರಿಶಿಷ್ಟ ವರ್ಗದ ಮತಗಳನ್ನು ನಂಬಿಕೊಂಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಗೆ ಪ್ರಬಲ ಪೈಪೋಟಿ ನೀಡಿದೆ.
ಒಟ್ಟಾರೆ ಕ್ಷೇತ್ರದ ಚುನಾವಣೆ ಕುತೂಹಲ ಮೂಡಿಸಿದೆ. ಪರಮೇಶ್ವರ್ ಎರಡನೇ ಗೆಲುವು ಪಡೆದು ಮುಖ್ಯಮಂತ್ರಿ ಗಾದಿ ಏರುತ್ತಾರೆಯೇ? ಅಥವ ಕೆಜೆಪಿ ಮತ್ತು ಜೆಡಿಎಸ್ ಪೈಪೋಟಿ ಅವರನ್ನು ಸೋಲಿನತ್ತ ಕರೆದೊಯ್ಯತ್ತದೆಯೇ ಎಂದು ಕಾದು ನೋಡಬೇಕು.
ಅಭ್ಯರ್ಥಿಗಳು
ಕಾಂಗ್ರೆಸ್ - ಡಾ.ಜಿ.ಪರಮೇಶ್ವರ್
ಕೆಜೆಪಿ - ವಾಲೆ ಚಂದ್ರಯ್ಯ
ಬಿಜೆಪಿ - ಪೆದ್ದರಾಜು
ಜೆಡಿಎಸ್ - ಪಿ.ಸುಧಾಕರ್ ಲಾಲ್
ಬಿಎಸ್ಆರ್ - ಆಂಜನೇಯ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications