ಇದು ಚುನಾವಣೆ ವಾರ: ಬಿಜೆಪಿ ನಿರ್ಗಮನಕ್ಕೆ ಕ್ಷಣಗಣನೆ

ಹಾಗಂತ ಮುಂದಿನ ಬಾರಿಗೂ ಮತ್ತೆ ಇದೇ ಬಿಜೆಪಿ ಸರಕಾರವನ್ನು ಜನ ಆರಿಸಿ ಕಳುಹಿಸಿದರೆ ಅದು ಬೇರೆಯದೇ ಮಾತು. ಆದರೆ ಸದ್ಯಕ್ಕಂತೂ ಹಾಲಿ/ಆಡಳಿತಾರೂಢ ಬಿಜೆಪಿಗೆ ವಂದನಾರ್ಪಣೆ ಸಲ್ಲಿಸುವ ಸಂದರ್ಭ ಬಂದೇ ಬಿಟ್ಟಿದೆ.
ರಾಜ್ಯದಲ್ಲಿ ಏನು ಕಡಿದು ಕಟ್ಟೆ ಹಾಕಿದರು, ರಾಜ್ಯವನ್ನು ಏನು ಉದ್ಧಾರ ಮಾಡಿದರು ಎಂದು ಇವರಿಗೆ ವಂದನಾರ್ಪಣೆ/ಅಭಿನಂದನೆಗಳನ್ನು ಸಲ್ಲಿಸಬೇಕೋ ತಿಳಿಯುತ್ತಿಲ್ಲ. ಆದರೆ ಕಾಲಾವಧಿ ಮುಗಿಯಿತೆಂದು ಐದು ವರ್ಷಗಳ ಜನರ ಸಂಕಷ್ಟವು ತನ್ನಷ್ಟಕ್ಕೇ ತಾನೇ ದೂರವಾಗುತ್ತಿದೆ. ಅಲ್ಲ, ಯಾವ ಕರ್ಮಕ್ಕಾಗಿ ಕರ್ನಾಟಕದ ಜನ ಇಷ್ಟೆಲ್ಲ ದುರಾಡಳಿತವನ್ನು ಸಹಿಸಬೇಕಾಯಿತು/ಕಾಣಬೇಕಾಯಿತು? ಇದರಲ್ಲಿ ಜನ ಮಾಡಿದ ತಪ್ಪಾದರೂ ಎನು?
ಕಾಲಚಕ್ರ ಅವರ ಕಾಲಿಗೇ ತೊಡರಿಕೊಂಡಿದೆ: ಅಬ್ಬಬ್ಬಾ ಪದ್ಮಪ್ರಿಯಾ ಹಗರಣದಿಂದ ಹಿಡಿದು ರಘುಪತಿ ಭಟ್ಟರ ತಾಜಾ ವಿಡಿಯೋವರೆಗೂ ಕರ್ನಾಟಕದ ಜನ ಏನೆಲ್ಲ ನೋಡಿ ಪರಮ ಪಾವನರಾದರು. ಆದರೆ ಸದ್ಯ ಇನ್ನೊಂದೆರಡು ದಿನ ಸಹಿಸಿಕೊಂಡರೆ ಸಾಕು ಈ ಸರಕಾರ ಜನ ಮಾನಸದಿಂದ ದೂರವಾಗಲಿದೆ. ಮುಂದೆ ಅಧಿಕಾರಕ್ಕೆ ಬರೋ ಪಕ್ಷದ ಆಡಳಿತ ಹೇಗಿರುತ್ತದೋ, ಆದರೆ ಸದ್ಯ ಬಿಜೆಪಿ ದುರಾಡಳಿತ ಕೊನೆಗಾಣುತ್ತಿದೆ ಎಂಬ ಸಂಗತಿಯೇ ಜನತೆಗೆ ಆನಂದ ತರುತ್ತಿದೆ.
ಇದು ಚುನಾವಣೆ ವಾರ: ನಾವೀಗ ಚುನಾವಣೆ ವಾರದಲ್ಲಿದ್ದೇವೆ. ಮತ ಹಾಕಲು ಇನ್ನು ಆರೇ ದಿನಗಳು ಬಾಕಿಯಿವೆ. ಬಿಜೆಪಿಯ ಆಡಳಿತ ನಿರ್ಗಮನಕ್ಕೂ ಇನ್ನು ಆರೇ ದಿನ. ಕಳೆದೈದು ವರ್ಷಗಳ ಆಡಳಿತವನ್ನು ರಿವೈಂಡ್ ಮಾಡಿ... ಅದೊಂದು ದುಃಸ್ವಪ್ನ ಎಂದುಕೊಂಡು ಮರೆತು, ಹೊಸ ಭರವಸೆಯೊಂದಿಗೆ, ನಿಮ್ಮ ವಿವೇಚನೆ ಬಳಸಿ ಮತಹಾಕಿ ಬನ್ನಿ. ನಿಮಗೆ ಶುಭವಾಗಲಿ!












Click it and Unblock the Notifications