For Daily Alerts
'ಭಾವಿ ಪ್ರಧಾನಿ' ಮೋದಿ ಮೇಲೆ ಲಷ್ಕರೆ ಉಗ್ರರ ಕಣ್ಣು
ಗಾಂಧಿನಗರ, ಏ.18: ಲಷ್ಕರೆ ತೊಯ್ಬಾ ಭಯೋತ್ಪಾದನೆ ಸಂಘಟನೆ ಕಳುಹಿಸಿದೆ ಎನ್ನಲಾದ ಪತ್ರ ಗಾಂಧಿನಗರ ಪೊಲೀಸರನ್ನು ಬೆಚ್ಚಿ ಬೀಳಿಸಿದೆ. ತಕ್ಷಣ ಜಾಗೃತರಾಗಿರುವ ಪೊಲೀಸರು ಮುಖ್ಯಮಂತ್ರಿ ನರೇಂದ್ರ ಮೋದಿಗೆ ವಿಶೇಷ ಭದ್ರತೆ ಒದಗಿಸಿದ್ದು, ರಾಜಧಾನಿ ಗಾಂಧಿನಗರದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ಗುಜರಾತ್ ಪೊಲೀಸ್ ಮಹಾನಿರ್ದೇಶಕ ಮತ್ತು ಗುಪ್ತಚರ ದಳ ಮುಖ್ಯಸ್ಥರ ಹೆಸರಿಗೆ ಈ ಓಲೆ ರವಾನೆಯಾಗಿದ್ದು, ನರೇಂದ್ರ ಮೋದಿ ಮತ್ತು ಕೆಲ ಆರೆಸ್ಸೆಸ್ ನಾಯಕರು ಲಷ್ಕರೆ ಉಗ್ರರ ಹಿಟ್ ಲಿಸ್ಟ್ ನಲ್ಲಿದ್ದಾರೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ. LeT terrorist ಎಂದು ಪತ್ರದಲ್ಲಿ ಸಹಿ ಮಾಡಲಾಗಿದೆ.
ಮುಖ್ಯವಾಗಿ ಆದಿತ್ಯ ಛೋಪ್ರಾ ಎಂಬ ಸಂಪಾದಕನ ಮೇಲೆ ಕೆಂಡ ಕಾರಿರುವ LeT terrorist, ಆತ ನರೆಂದ್ರ ಮೋದಿಯನ್ನು ಭವಿಷ್ಯದ ಪ್ರಧಾನಿಯನ್ನಾಗಿ ಪ್ರತಿಬಿಂಬಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಹೀಗೆ ಮಾಧ್ಯಮದ ಮೂಲಕ ಮೋದಿಯನ್ನು ಪ್ರಧಾನಿ ಪಟ್ಟಕ್ಕೆ ತರಲು ಯತ್ನಿಸುತ್ತಿರುವ ಆದಿತ್ಯ ಛೋಪ್ರಾ ಎಂಬ ಸಂಪಾದಕನನ್ನು ಸಾಯಿಸುವುದಾಗಿ ಸದರಿ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಅಂದಹಾಗೆ, ಆದಿತ್ಯ ಛೋಪ್ರಾ ಉತ್ತರ ಭಾರತದ ಪ್ರಸಿದ್ಧ ದಿನಪತ್ರಿಕೆಯೊಂದರ ಸಂಪಾದಕ.
ಪತ್ರ ತಲುಪುತ್ತಿದ್ದಂತೆ ಗುಪ್ತಚರ ದಳ ಪೊಲೀಸರನ್ನು ಎಚ್ಚರಗೊಳಿಸಿದ್ದು, ಭದ್ರತೆಯನ್ನು ಬಿಗಿಗೊಳಿಸಿದೆ.