ಜೆಡಿಎಸ್ ಕಿಂಗ್ ಮೇಕರ್ : ಗುಪ್ತಚರ ವರದಿ

ಚುನಾವಣೆಗೆ ಕೆಲವು ದಿನಗಳು ಉಳಿದಿರುವಾಗ ಬಿಡುಗಡೆಗೊಂಡಿರುವ ರಾಜ್ಯ ಗುಪ್ತಚರ ಇಲಾಖೆ ವರದಿ ರಾಜ್ಯದ ರಾಜಕೀಯ ಚಿತ್ರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಜೆಡಿಎಸ್ 49 ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿಗೆ 60 ಸ್ಥಾನಗಳು ದೊರೆಯಲಿದ್ದು, ಎರಡು ಪಕ್ಷಗಳ ನಡುವೆ ಮೈತ್ರಿಯಾದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದೆ.
ಬಿಜೆಪಿಯ ಭ್ರಷ್ಟಾಚಾರದಿಂದ ಜನರು ಬೇಸತ್ತು ಕಾಂಗ್ರೆಸ್ ಗೆ ಮತ ನೀಡುತ್ತಾರೆ ಎಂಬ ನಾಯಕರ ಲೆಕ್ಕಾಚಾರಗಳನ್ನು ಜನರು ತಪ್ಪಿಸಲಿದ್ದಾರೆ. ಕೇವಲ 83 ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟು ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎನ್ನುವುದು ವರದಿಯ ಸಂಪೂರ್ಣ ವಿವರ.
ಕೆಜೆಪಿ, ಬಿಎಸ್ಆರ್ ಲೆಕ್ಕಕ್ಕಿಲ್ಲ : ವರದಿ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ನಿರೀಕ್ಷಿತ ಗೆಲುವು ಸಾಧಿಸುವುದಿಲ್ಲ. ಕೆಜೆಪಿ 10, ಬಿಎಸ್ಆರ್ ಕಾಂಗ್ರೆಸ್ 6 ಮತ್ತು ಪಕ್ಷೇತರರು 6 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ವಿಶ್ಲೇಷಿಸಿದೆ.
ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ಅವರು ಮಾಡಿದ ಕಾರ್ಯಗಳು ಮತ್ತು ಹಗಲಿರುಳು ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿರುವುದಕ್ಕೆ ಜನರು ಬೆಂಬೆಲ ನೀಡಲಿದ್ದು, 49 ಸ್ಥಾನಗಳನ್ನು ನೀಡಲಿದ್ದಾರೆ. ಜೆಡಿಎಸ್ ಹೊರತಾಗಿ ಯಾವ ಪಕ್ಷವೂ ಸರ್ಕಾರ ರಚಿಸುವುದು ಅಸಾಧ್ಯ ಎಂದು ವರದಿ ಹೇಳಿದೆ.
ಕಾಂಗ್ರೆಸ್ ಗೆಲುವಿಗೆ ಬಂಡಾಯವೇ ಅಡ್ಡಿ : ಕಾಂಗ್ರೆಸ್ ಪಕ್ಷ ಈಗಾಗಲೇ ಚುನಾವಣೆ ಗೆದ್ದಂತೆ ಬೀಗುತ್ತಿದೆ. ಪಕ್ಷದಲ್ಲಿನ ಬಂಡಾಯ, ಟಿಕೆಟ್ ಹಂಚಿಕೆಯ ಗೊಂದಲ ಪಕ್ಷದ ಸೋಲಿಗೆ ಪ್ರಮುಖ ಕಾರಣವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಯಾರು ಗೆಲ್ಲುತ್ತಾರೆ : ಕುಮಾರಸ್ವಾಮಿ ದಂಪತಿ, ರೇವಣ್ಣ, ಚೆಲುವರಾಯಸ್ವಾಮಿ, ಪಿ.ಜಿ.ಆರ್.ಸಿಂಧ್ಯಾ, ಡಿ.ಸಿ.ತಮ್ಮಣ್ಣ, ಜಮೀರ್ ಅಹಮದ್ ಖಾನ್ ಮತ್ತು ಸಿ.ಎನ್.ಬಾಲಕೃಷ್ಣ ಮುಂತಾದವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಅನಂತ್ ಅಥವ ಸಂತೋಷ್ ಜಿ ಡಿಸಿಎಂ : ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಪ್ಪಂದವಾದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ. ಅನಂತ ಕುಮಾರ್ ಅಥವ ಸಂತೋಷ್ ಜಿ ಉಪ ಮುಖ್ಯಮಂತ್ರಿಯಾಗಿ ಒಕ್ಕಲಿಗ ಮತ್ತು ಬ್ರಾಹ್ಮಣರ ಸಮ್ಮಿಶ್ರ ಸರ್ಕಾರ ರಚನೆ ಆಗಲಿದೆ ಎಂದು ವರದಿ ಹೇಳಿದೆ.
ರಾಜ್ಯ ಗುಪ್ತಚರ ಇಲಾಖೆ ತನ್ನ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಆದರೆ, ಇದರ ಸಾಧ್ಯಸಾಧ್ಯತೆ ಏನು ಎಂಬುದು ಮತದಾರರ ಅಂತಿಮ ನಿರ್ಧಾರದ ಮೇಲೆ ನಿರ್ಣಯವಾಗುತ್ತದೆ. ಬಿಜೆಪಿಯೊಂದಿಗಿನ ಮೈತ್ರಿಗೆ ಜೆಡಿಎಸ್ ವರಿಷ್ಠ ದೇವೇಗೌಡರು ಒಪ್ಪಿಗೆ ನೀಡುತ್ತಾರೋ? ಎನ್ನುವುದು ಬಗೆಹರಿಯದ ಪ್ರಶ್ನೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications