'ಬಿಗ್ ಬಾಸ್' ಸಂಜನಾ ಸೆಳೆಯಲು ಪಕ್ಷಗಳ ಗಾಳ?

ಜೆಡಿಎಸ್ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರ ಅತಿಯಾದ ವಿಶ್ವಾಸವೋ ಅಥವಾ ಸ್ಟಾರ್ ಪ್ರಚಾರಕಿಯಾಗಿ ಮಹಿಳಾ ಸಿನೆಮಾ ತಾರೆಗಳನ್ನು ಆರಿಸಿಕೊಂಡರೆ ಕೊಂಕು ಮಾತುಗಳು ಕಟ್ಟಿಟ್ಟ ಬುತ್ತಿ ಎಂಬ ಜಾಣತನದಿಂದ ಅವರನ್ನು ದೂರಿಟ್ಟಿದ್ದಾರೋ ಬಲ್ಲವರು ಯಾರು?
ಕಾಂಗ್ರೆಸ್ ಪಕ್ಷ ಸ್ಟಾರ್ ಪ್ರಚಾರಕರನ್ನು (ರಮ್ಯಾ, ಭಾವನಾ, ದರ್ಶನ್) ಕೇವಲ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದರೆ, ಒಂದು ಹೆಜ್ಜೆ ಮುಂದೆಯೇ ಹೋಗಿರುವ ಬಿ ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ತಾರಾಮಣಿಗಳನ್ನು ಸೆಳೆದುಕೊಳ್ಳುತ್ತಿರುವುದು ಮಾತ್ರವಲ್ಲ, ಯಾವುದೋ ಒಂದು ದೂರದ ಕ್ಷೇತ್ರದಲ್ಲಿ ಟಿಕೆಟ್ ಕೂಡ ನೀಡಿ ಕಣಕ್ಕೆ ಇಳಿಸುತ್ತಿದೆ.
ಇದಕ್ಕೆ ಕನ್ನಡ ಬಿಗ್ ಬಾಸ್‌ನಿಂದ ಹೊರದಬ್ಬಿಸಿಕೊಂಡಿರುವ ಮಾಜಿ ನರ್ಸ್, ಹಾಲಿ ಪುಢಾರಿಣಿ ಜಯಲಕ್ಷ್ಮಿಯೇ ಸಾಕ್ಷಿ. ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದೇ ತಡ ಜಯಲಕ್ಷ್ಮೀ ಮೇಡಂ ಆಲ್ ಇಂಡಿಯಾ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದಾರೆ. ಕಂಡಕಂಡ ಚಾನಲ್ಲಿಗೆ ಹಾರುತ್ತ (ಕ್ಷಮಿಸಿ ಹಾರಲು ಆಗಲ್ಲ) ಇಂಟರ್‌ವ್ಯೂ ಮೇಲೆ ಇಂಟರ್‌ವ್ಯೂ ನೀಡಿದ್ದಾರೆ. ಸಾಲದೆಂಬಂತೆ ಬಿಎಸ್ಆರ್ ಕಾಂಗ್ರೆಸ್ ಸೇರಿ ಟಿಕೆಟ್‌ಗಾಗಿ ಕಾದು ಕುಳಿತಿದ್ದಾರೆ.
ಈ ಸುದ್ದಿಯ ಹಿಂದೆಯೇ ಮತ್ತೊಂದು ರಸವತ್ತಾದ ಸುದ್ದಿ ಬಿಗ್ ಬಾಸ್ ಅಂಗಳದಿಂದ ಹೊರಬಿದ್ದಿದೆ. ಬಿಗ್ ಬಾಸ್ ಮನೆಯಿಂದ ಹೊರಬಿದ್ದಿರುವ ಎರಡನೇ ಹುದ್ದರಿ ಬಿಂದಾಸ್ ಬೆಡಗಿ ನಟಿ ಸಂಜನಾ ಗಲ್ರಾಣಿ ಅವರಿಗೆ ಗಾಳ ಹಾಕಲು ನಾನಾ ಪಕ್ಷಗಳು ಪ್ರಯತ್ನಿಸುತ್ತಿವೆ ಎಂಬ ಸುದ್ದಿ ಬಿರುಗಾಳಿಗೆ ಸಿಕ್ಕ ಗಾಳಿಪಟದಂತೆ ಹಾರಾಡುತ್ತಿದೆ.
'ಗಂಡ ಹೆಂಡತಿ' ಚಿತ್ರದಲ್ಲಿ ಪಡ್ಡೆಗಳು ಬಾಯಿಚಪ್ಪರಿಸುವಂತೆ ಕಾಣಿಸಿ ಹೆಸರು ಮಾಡಿದ್ದ (ಕೆಡಿಸಿಕೊಂಡಿದ್ದ) ಸಂಜನಾ ಬಿಗ್ ಬಾಸಲ್ಲಿ ತಮ್ಮ ಸೌಂದರ್ಯವನ್ನು ಮತ್ತೆ ಅನಾವರಣ ಮಾಡಿದ್ದೇ ತಡ ಯಕ್ಕಾಚಿಕ್ಕಿ ಮನೆಮಾತಾಗಿಬಿಟ್ಟಿದ್ದಾರೆ. ಅವರು ಸೋಮವಾರ ಬಿಗ್ ಬಾಸ್‌ನಿಂದ ಅಂತಿಮವಾಗಿ ಹೊರಬೀಳುತ್ತಿದ್ದಂತೆ ಹಾರ ತುರಾಯಿ ಹಿಡಿದು ಕೆಲ ಪಕ್ಷಗಳ ಕಾರ್ಯಕರ್ತರು ನಿಲ್ಲುವವರಿದ್ದಾರೆ ಎಂಬ ಬಾತ್ಮಿ ಗಿರಿಕಿ ಹೊಡೆಯುತ್ತಿದೆ.
ಅರಳು ಹುರಿದಂತೆ ಪಟಪಟನೆ ಮಾತಾಡುವ ಸಂಜನಾಗೆ ಇದು ಸಿಗಲಿರುವ ಅತ್ಯುತ್ತಮ ಅವಕಾಶ. ಗಾಳಿ ಬಂದತ್ತ ತೂರಿಕೋ ಎಂಬ ಗಾದೆ ಈಗ ಆಕೆಗೆ ಹೇಳಿ ಮಾಡಿಸಿದಂತಿದೆ. ಯಾವ ಪಕ್ಷಕ್ಕೆ ಸಂಜನಾರನ್ನು ಒಲಿಸಿಕೊಳ್ಳಲಿದೆ ಎಂಬುದು ಈಗ ಊಹೆಗೂ ಮೀರಿದ ಸಂಗತಿ. ಯಾವ ಪಕ್ಷ ತಯಾರಿಲ್ಲದಿದ್ದರೂ, ನರ್ಸ್ ಜಯಲಕ್ಷ್ಮೀ, ಚಾಮರಾಜನಗರದಿಂದ ಸ್ಪರ್ಧಿಸುತ್ತಿರುವ ರಕ್ಷಿತಾ, ರಾಯಚೂರಿನಿಂದ ಸ್ಪರ್ಧೆಗಿಳಿದಿರುವ ಪೂಜಾಗಾಂಧಿಯರಿಂದ ಸಾಕಷ್ಟು 'ತೂಕ' ಗಳಿಸಿರುವ ಬಿಎಸ್ಆರ್ ಕಾಂಗ್ರೆಸ್ ಅಂತೂ ಇದ್ದೇ ಇದೆ!
ಅಂದ ಹಾಗೆ, ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಹೋಗುತ್ತೇನೆಂದು ಹೇಳುತ್ತಲೇ, ಬಿಗ್ ಬಾಸಿಗೆ ಧಮ್ಕಿ ಹಾಕಿಯೂ ಅಲ್ಲೇ ಉಳಿದುಕೊಂಡಿರುವ ಖ್ಯಾತ ಜ್ಯೋತಿಷಿ ನರೇಂದ್ರ ಬಾಬು ಶರ್ಮಾ ಅವರು ಬಿಗ್ ಬಾಸ್‌ನಿಂದ ಹೊರಬೀಳುತ್ತಿದ್ದಂತೆ ಅವರನ್ನು ಸ್ಟಾರ್ ಪ್ರಚಾರಕನನ್ನಾಗಿ ಮಾಡಲು ಕೆಲ ಪಕ್ಷಗಳು ಯೋಚಿಸುತ್ತಿವೆ ಎಂಬ ಸುದ್ದಿಯೂ ಗಾಳಿಗಿಂತ ವೇಗವಾಗಿ ಚಲಿಸುತ್ತಿದೆ. ಇದು ಹೀಗೇ ಮುಂದುವರಿದರೆ ಬಿಗ್ ಬಾಸ್ ರಿಯಾಲಿಟಿ ಶೋ ಗತಿಯೇನು?
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications