ಪವಾಡ : 29 ಗಂಟೆಗಳ ನಂತರ 'ಗುಡಿಯಾ' ರಕ್ಷಣೆ

ಕಟ್ಟಡ ನಿರ್ಮಾಣದ ಎಲ್ಲ ನಿಮಯಗಳನ್ನು ಗಾಳಿಗೆ ತೂರಿ ಕಟ್ಟಲಾಗಿದ್ದ ಏಳಂತಸ್ತಿನ ಕಟ್ಟಡ ಈಗಾಗಲೆ 74 ಜನರನ್ನು ಬಲಿತೆಗೆದುಕೊಂಡಿದೆ. ಇನ್ನೂ ಅನೇಕ ಜನರು ಸಿಲುಕಿರಬಹುದೆಂದು ಹೇಳಲಾಗುತ್ತಿದೆ. ಅವಶೇಷಗಳನ್ನು ತೆರವು ಮಾಡುವ ಕಾರ್ಯ ನಿರಂತರವಾಗಿದೆ.
ಬಂಧುಗಳನ್ನು ಕಳೆದುಕೊಂಡವರ ಆಕ್ರಂದನ ಒಂದೆಡೆಯಾಗಿದ್ದರೆ, ಆ ದುಃಖದ ಕ್ಷಣಗಳ ನಡುವೆಯೂ 10 ತಿಂಗಳ ಮಗುವನ್ನು ಯಶಸ್ವಿಯಾಗಿ ರಕ್ಷಿಸಿದಾಗ ಅಲ್ಲಿ ಹರುಷದ ಹೊನಲು ಹರಿದಿತ್ತು. ಮಗು ಪವಾಡಸದೃಶ್ಯವಾಗಿ ಪಾರಾಗಿ ಹೊರಬಂದಾಗ ರಕ್ಷಣಾ ಸಿಬ್ಬಂದಿಗಳನ್ನು ಅಲ್ಲಿದ್ದವರೆಲ್ಲ ಅಭಿನಂದಿಸಿದರು. ಕೆಲವರ ಕಣ್ಣಲ್ಲಿ ಆನಂದದ ಕಂಬನಿ ಜಿನುಗಿತ್ತು.
ಆ ಮಗುವಿನ ಬಗ್ಗೆ ಯಾರಿಗೂ ಪರಿಚಯ ಇಲ್ಲದ್ದರಿಂದ ಮಗುವಿಗೆ 'ಗುಡಿಯಾ' (ಗೊಂಬೆ) ಎಂದು ನಾಮಕರಣ ಮಾಡಲಾಗಿದೆ. ಮಗುವನ್ನು ಛತ್ರಪತಿ ಶಿವಾಜಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದಾದಿಯರ ಆರೈಕೆಯಲ್ಲಿ ಗುಡಿಯಾ ಚೇತರಿಸಿಕೊಳ್ಳುತ್ತಿದ್ದಾಳೆ.
ಏನನ್ನೂ ಅರಿಯದ ಹತ್ತು ತಿಂಗಳ ಪುಟಾಣಿ ಮಗು ಬೊಂಬೆಯಂತೆ ಕಾಣುತ್ತಿದ್ದರಿಂದ ಅದಕ್ಕೆ ಗುಡಿಯಾ ಎಂದೇ ನಾಮಕರಣ ಮಾಡಿದ್ದೇವೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹೇಳುತ್ತಾರೆ. ಹಣೆ ಮತ್ತು ಗಲ್ಲದ ಮೇಲೆ ಮಗುವಿಗೆ ತರಚಿದ ಗಾಯಗಳಾಗಿದ್ದು ಬಿಟ್ಟರೆ ಅಂತಹ ಗಂಭೀರ ಗಾಯಗಳಾಗಿಲ್ಲದಿರುವುದು ನಿಜಕ್ಕೂ ಪವಾಡವೆ ಎಂದು ಅವರು ಹೇಳುತ್ತಾರೆ.
ಇಂಥ ಭೀಕರ ದುರಂತದಲ್ಲಿ ಸಣ್ಣಪುಟ್ಟ ಗಾಯಗಳಿಂದ ಬದುಕುಳಿದಿರುವುದು ನಿಜಕ್ಕೂ ದೇವರ ಆಶೀರ್ವಾದದಿಂದ ಎಂದು ಆಸ್ಪತ್ರೆ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಗುಡಿಯಾ ತನ್ನ ತಾಯಿ ಮತ್ತು ಇನ್ನೊಬ್ಬ ಮಹಿಳೆಯೊಂದಿಗೆ ಅಲ್ಲಿ ವಾಸಿಸುತ್ತಿದ್ದರು. ಆದರೆ, ಇಲ್ಲಿಯವರೆಗೆ ಮಗುವನ್ನು ಪಡೆಯಲು ಯಾರೂ ಬಂದಿಲ್ಲ. ಕಟ್ಟಡದಡಿ ಸಿಲುಕಿದ್ದ 65 ವರ್ಷದ ಕುತಿಬಿ ಶೇಕ್ ಅವರನ್ನು ಕೂಡ 30 ಗಂಟೆಗಳ ನಂತರ ರಕ್ಷಿಸಲಾಗಿದೆ.












Click it and Unblock the Notifications