ತಿರುಪತಿ: ವಿಶೇಷ ಭಕ್ತರಿಗೆ ಇನ್ನಿಲ್ಲ VIP ದರ್ಶನ ಭಾಗ್ಯ
ತಿರುಪತಿ, ಏ.2: ಮುಕೇಶ್ ಅಂಬಾನಿ, ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್ ಅಂತಹ ಗಣ್ಯಾತಿಗಣ್ಯರಿಗೆ ಇದು ತುಸು ನಿರಾಶಾದಾಯಕ ಸುದ್ದಿಯಾಗಲಿದೆ. ಏಕೆಂದರೆ ಇನ್ನು ಮುಂದೆ ಇಂತಹ ಗಣ್ಯರು ವಿಶೇಷವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆಯುವಂತಿಲ್ಲ. ಸಾಮಾನ್ಯರಂತೆ ಅವರೂ ಸರದಿಯಲ್ಲಿ ನಿಂತು ತಿಮ್ಮಪ್ಪನ ಆಶೀರ್ವಾದ ಪಡೆಯಬೇಕು.
ಯಾಕಪ್ಪಾ ಗಣ್ಯಾತಿಗಣ್ಯರಿಗೆ ಈ ರಗಳೆ ಅಂದರೆ... ಖ್ಯಾತ ನಾಮ ಉದ್ಯಮಿಗಳು, ರಾಜಕಾರಣಿಗಳು, ತಾರಾಮಣಿಗಳು, ಕ್ರೀಡಾಪಟುಗಳು, ಉನ್ನತಾಧಿಕಾರಿಗಳು ಮುಂತಾದ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ಶ್ರೀ ವೇಂಕಟೇಶ್ವರನ ದರ್ಶನಕ್ಕಾಗಿ Tirumala Tirupati Devasthanams (TTD) ವಿಶ್ವಸ್ಥ ಮಂಡಳಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸುತ್ತಿತ್ತು. ಆದರೆ ಇನ್ನು ಮುಂದೆ ಇಂತಹ ವಿಶೇಷ ದರ್ಶನ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು TTD ಆಲೋಚಿಸುತ್ತಿದೆ.

VIP ಪಾಸ್ ಗೂ ಕೊಕ್ಕೆ?: ವಿಶೇಷ ದರ್ಶನ ವ್ಯವಸ್ಥೆಯು ಇವರಿಗಷ್ಟೇ ಸೀಮಿತಗೊಳ್ಳದೆ ಈ ಗಣ್ಯಾತಿಗಣ್ಯರ ಶಿಫಾರಸ್ಸು ಪತ್ರ ಹಿಡಿದು ಇನ್ನೂ ಅನೇಕ ಮಂದಿ ಈ ವ್ಯವಸ್ಥೆಯ ದುರ್ಲಾಭ ಪಡೆಯುತ್ತಿದ್ದರು. ಆದರೆ ಇದರಿಂದ ತೊಂದರೆಗೊಳಗಾಗುತ್ತಿದ್ದುದು ಸಾಮಾನ್ಯ ಸರದಿಯಲ್ಲಿ ನಿಲ್ಲುವ ಸಾಮಾನ್ಯ ಭಕ್ತ.
ದಿನೇ ದಿನೆ ತಿರುಪತಿಯ ಶ್ರೀ ವೇಂಕಟೇಶ್ವರನ ದರ್ಶನಕ್ಕಾಗಿ ಆಗಮಿಸುವ ಭಕ್ತರ ಸಂಖ್ಯೆ ತೀವ್ರವಾಗಿ ಹೆಚ್ಚಾಗುತ್ತಿದೆ. ಹಾಗಾಗಿ ಪ್ರತಿ ದಿನ 2 ಬಾರಿ ತಲಾ ಒಂದು ಗಂಟೆ ಕಾಲ VVIP ದರ್ಶನಕ್ಕಾಗಿ ಭಕ್ತರ ಸಾಮಾನ್ಯ ದರ್ಶನ ಕ್ಯೂ ಅನ್ನು ತಡೆಹಿಡಿಯುವುದರಿಂದ ತೀವ್ರ ತೊಂದರೆ ಅನುಭವಿಸುವ ಬಗ್ಗೆ ಅಸಮಾಧಾನ/ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.
ಇದನ್ನೆಲ್ಲ ಗಮನಕ್ಕೆ ತೆಗೆದುಕೊಂಡು ಆರಂಭದಲ್ಲಿ ಸಂಜೆ ಕಾಲದ VVIP ದರ್ಶನವನ್ನು ಸ್ಥಗಿತಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದರಿಂದ ಹೆಚ್ಚು ಮಂದಿ ಸಾಮಾನ್ಯ ಭಕ್ತರು ತಿಮ್ಮಪ್ಪನ ದರ್ಶನ ಪಡೆಯುವುದಕ್ಕೆ ಅನುವಾಗುತ್ತದೆ ಎಂದು TTD ಅಧ್ಯಕ್ಷ ಕನುಮುರಿ ಬಾಪಿರಾಜು ಆಶಿಸಿದ್ದಾರೆ.
ಆಡಳಿತ ಮಂಡಳಿ ಸಭೆಯಲ್ಲಿ ಈಗಾಗಲೇ ಈ ಪ್ರಸ್ತಾವನೆ ಬಗ್ಗೆ ಅನೌಪಚವಾರಿಕವಾಗಿ ಅನುಮೋದನೆ ದಕ್ಕಿದೆ. ಮಂಡಳಿಯ ಮುಂದಿನ ಸಭೆಯಲ್ಲಿ ಇದಕ್ಕೆ ಅಂಗೀಕಾರ ದೊರೆಯುವ ಸಾಧ್ಯತೆಯಿದೆ ಎಂದು TTD ನೂತನ ಅಧ್ಯಕ್ಷ ಬಾಪಿರಾಜು ತಿಳಿಸಿದ್ದಾರೆ. ಆದರೆ ಉಳ್ಳವರ ಮುಂದೆ ಸಾಮಾನ್ಯ ಭಕ್ತರಿಗೆ ಇಂತಹ ನ್ಯಾಯ ದಕ್ಕುತ್ತದಾ? ಎಂಬುದೇ ಯಕ್ಷಪ್ರಶ್ನೆ.












Click it and Unblock the Notifications