ಓಟರ್ಸ್ ಸೆಟಪ್ ಮಾಡ್ಕೊಳ್ಳಿಕ್ಕೆ ಸೆಟ್ ಟಾಪ್ ಬಾಕ್ಸ್!

ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, ಬೆಂಗಳೂರಿನಲ್ಲಿ ಕೆಲವು ಅಭ್ಯರ್ಥಿಗಳು ಸೆಟ್ ಟಾಪ್ ಬಾಕ್ಸ್ ಹಂಚುತ್ತಿರುವ ಬಗ್ಗೆ ಈಗಾಗಲೇ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಆದೇಶದಂತೆ ಮಾ.31 ಅಂದರೆ ಇಂದಿನಿಂದ ಬೆಂಗಳೂರು ಮತ್ತು ಮೈಸೂರಿನಲ್ಲಿ ಸೆಟ್ ಟಾಪ್ ಬಾಕ್ ಅಳವಡಿಸಿಕೊಳ್ಳದಿದ್ದರೆ ಟಿ.ವಿ. ವೀಕ್ಷಿಸುವುದು ಅಸಾಧ್ಯ. ಕೇಬಲ್ ಟಿವಿ ಡಿಜಿಟಲ್ ಆಗುವುದರಿಂದ ಸೆಟ್ ಟಾಪ್ ಬಾಕ್ಸ್ ಹಾಕಿಸಿಕೊಳ್ಳುವುದು ಅಗತ್ಯ.
ಇದನ್ನೇ ಚುನಾವಣಾ ತಂತ್ರವಾಗಿ ಪರಿವರ್ತಿಸಿರುವ ಕೆಲವು ಪಕ್ಷಗಳ ಅಭ್ಯರ್ಥಿಗಳು, ತಮ್ಮ ಕ್ಷೇತ್ರದಲ್ಲಿ ಸೆಟ್ ಟಾಪ್ ಬಾಕ್ಸ್ ಹಂಚುತ್ತಿರುವ ಬಗ್ಗೆ ಆಯೋಗಕ್ಕೆ ದೂರು ಹೋಗಿದೆ. ಆದರೆ, ಇಂತಹ ಅಭ್ಯರ್ಥಿಗಳು ಯಾರು? ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲವಾಗಿದೆ ಆದ್ದರಿಂದ ಕ್ರಮ ಜರುಗಿಸುವುದು ಅಸಾಧ್ಯ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.
ಹೆಲಿಕಾಪ್ಟರ್ ಮೇಲೆ ಕಣ್ಣು : ಅಭ್ಯರ್ಥಿಯು ತನ್ನ ಪ್ರಚಾರ ಕಾರ್ಯಕ್ಕೆ ಹೆಲಿಕಾಪ್ಟರ್ ಬಳಸಿದರೆ ಅದನ್ನು ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ಅನಿಲ್ ಕುಮಾರ್ ಹೇಳಿದ್ದಾರೆ. ಯಾವ ಅಭ್ಯರ್ಥಿ ಎಲ್ಲಿಂದ, ಎಲ್ಲಿಗೆ ಪ್ರಯಾಣಿಸುತ್ತಾನೆ ಎಂದು ಮೊದಲೇ ಆಯೋಗಕ್ಕೆ ಮಾಹಿತಿ ನೀಡಬೇಕು ಎಂಬ ನಿಯಮವನ್ನು ರೂಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಹೆಲಿಕಾಪ್ಟರ್ ಬಳಕೆಯ ಮೇಲೆ ನಿಗಾ ವಹಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಅಭ್ಯರ್ಥಿ ತನ್ನ ಜೊತೆ ರಾಷ್ಟ್ರೀಯ ನಾಯಕರು ಅಥವ ಸ್ಟಾರ್ ಪ್ರಚಾರಕರನ್ನು ಕರೆದೊಯ್ಯತ್ತಿದ್ದರೆ ಮುಂಚಿತವಾಗಿ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಊಟ ಹಾಕಿರಿ ಜೋಕೆ : ಹಬ್ಬ ಮುಂತಾದವುಗಳ ನೆಪದಲ್ಲಿ ಮತದಾರರರಿಗೆ ಸಾಮೂಹಿಕವಾಗಿ ಸಸ್ಯಹಾರಿ, ಮಾಂಸಹಾರಿ ಊಟ ಹಾಕಿದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಇಂತಹ ಅಭ್ಯರ್ಥಿಗಳ ವಿರುದ್ಧ ನಾಮ ಪತ್ರ ಸಲ್ಲಿಕೆಯಾದ ತಕ್ಷಣ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications