ಸಿ.ಟಿ.ರವಿಗೆ ಈ ಬಾರಿ ಸೋಲು ಗ್ಯಾರಂಟಿಯಂತೆ

ಚುನಾವಣೆ ಘೋಷಣೆಯಾದ ಮೇಲೆ ಕೆಲವು ರಾಜಕೀಯ ಪಕ್ಷಗಳ ಕಣ್ಣು ಚಿಕ್ಕಮಗಳೂರಿನ ಸಿ.ಟಿ.ರವಿ ಅವರ ಮೇಲೆ ಬಿದ್ದಿದೆ. ಕೇಸರಿ ಶಾಲು ಹಾಕಿಕೊಂಡು, ಗಡ್ಡಧಾರಿಯಾಗಿ ದತ್ತಪೀಠ ಮಂತ್ರ ಜಪಿಸುವ ಸಿ.ಟಿ.ರವಿ ವಿರುದ್ಧ ಎಲ್ಲಾ ಪಕ್ಷಗಳಿಂದ ಜಂಟಿಯಾಗಿ ಒಬ್ಬನೇ ಅಭ್ಯರ್ಥಿಯನ್ನು ನಿಲ್ಲಿಸಲು ಪಕ್ಷಗಳು ಕೈ ಜೋಡಿಸಿವೆಯೆಂಬ ಸುದ್ದಿ ಚಿಕ್ಕಮಗಳೂರಿನಲ್ಲಿ ಕಾಫಿ ಪರಿಮಳದಂತೆ ಹರಡಿದೆ.
ಕರ್ನಾಟಕದಲ್ಲಿ ನೂತನವಾಗಿ ರಚನೆಯಾದ ಪಕ್ಷದ ಕಾರ್ಯಕಾರಣಿ ಸದಸ್ಯರೊಬ್ಬರು ತೆಂಗಿನ ಕಾಯಿ ಮೇಲೆ ಪ್ರಮಾಣ ಮಾಡಿ ಈ ಬಾರಿ ಸಿ.ಟಿ.ರವಿ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ, ಎಷ್ಟು ಮತಗಳ ಅಂತರದಲ್ಲಿ ಸೋಲುತ್ತಾರೋ ಲೆಕ್ಕಹಾಕಿ ಎಂದು ತಮ್ಮ ಐದು ಬೆರಳಿನ ಉಂಗುರ ಪ್ರದರ್ಶಿಸುತ್ತಾ, ಚಿಕ್ಕಮಗಳೂರಿನಲ್ಲಿ ಕಾಫಿ ಕುಡಿಯುತ್ತಿದ್ದಾರಂತೆ.
ಬಿಜೆಪಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿರುವ ರವಿ ಬಾಯಿತೆರೆದರೆ ಹಿಂದುತ್ವದ ವಿಚಾರ ಮಾತನಾಡುತ್ತಾರೆ ಎಂದು ಕೆಲವರು ಗೊಣಗುತ್ತಿದ್ದಾರೆ. ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಿಸುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೆಲವರು ರಾಜ್ಯಪಾಲರ ಮೇಲೆ ಗೂಬೆ ಕೂರಿಸಿದ್ದಾರೆ.
ಸಿ.ಟಿ.ರವಿ ಉನ್ನತ ಶಿಕ್ಷಣ ಸಚಿವವರು ಅವರು ರಾಜ್ಯಾಪಾಲರಿಂದ ಪಾಲು ಪಡೆದಿದ್ದಾರೆ. ಆದ್ದರಿಂದ ಅವರ ಹೆಸರು ಸಿ.ಟಿ.ರವಿಯಲ್ಲ ಕೋಟಿ ರವಿ ಎಂದು ಕೆಲವರು ಕುಟುಕಿ ಸಂತೋಷ ಪಟ್ಟಿದ್ದಾರಂತೆ. ಚಿಕ್ಕಮಗಳೂರಿನಲ್ಲಿ ರವಿ ಕೋಟ್ಯಾಂತರ ರೂ. ಆಸ್ತಿ ಮಾಡಿದ್ದಾರೆ ಎಂದು ಕೆಲವರು ಲೋಕಾಯುಕ್ತ ಕಚೇರಿಯ ಮಟ್ಟಿಲುಹತ್ತಿ ರವಿ ದಂಪತಿಗಳನ್ನು ಕೋರ್ಟ್ ಮೆಟ್ಟಿಲು ಹತ್ತಿಸಿ ಬಂದಿದ್ದಾರೆ.
ಎಷ್ಟು ತೊಂದರೆ ಕೊಟ್ಟರೂ ಗುಂಡು ಹೊಡೆದಂತೆ ಮಾತನಾಡುವ ರವಿಯಂತಹ ಗಂಡನ್ನು ಸೋಲಿಸಲು ಯಾರು ಸರಿ ಎಂದು ವಿವಿಧ ಪಕ್ಷಗಳು ಚಿಕ್ಕಮಗಳೂರಿನ ತುಂಬಾ ಹುಟುಕಾಟ ನಡೆಸಿವೆಯಂತೆ. ಈ ಪಕ್ಷ ಹೇಳುವ ಅಭ್ಯರ್ಥಿ ಇನ್ನೊಂದು ಪಕ್ಷದವರಿಗೆ ಒಪ್ಪಿಗೆ ಯಾಗುತ್ತಿಲ್ಲ. ಹೀಗಾಗಿ ಈ ಜಂಟಿ ಸಂಯುಕ್ತ ರಂಗ ಅಭ್ಯರ್ಥಿಗಳ ಭೇಟೆಯಲ್ಲಿ ಫುಲ್ ಬ್ಯುಸಿಯಾಗಿವೆ.
ಯಡಿಯೂರಪ್ಪ, ಈಶ್ವರಪ್ಪ, ಹಾಲಿ ಸಿಎಂ ಶೆಟ್ಟರ್, ಸಿದ್ದರಾಮಯ್ಯ ಮುಂತಾದ ಘಟಾನುಘಟಿ ನಾಯಕರನ್ನು ಬಿಟ್ಟು ರವಿಯನ್ನು ಸೋಲಿಸಲು ಪಕ್ಷಗಳು ಒಂದಾಗಿರುವುದೇಕೆ, ಇದರ ಲೆಕ್ಕಾಚಾರವೇನು ಎಂದು ರಾಜಕೀಯ ಜ್ಯೋತಿಷಿಗಳು ಕವಡೆ ಹಾಕಿ ಉತ್ತರ ಹುಡುಕುತ್ತಿದ್ದಾರಂತೆ. ಸಿ.ಟಿ.ರವಿ ವಿರುದ್ಧ ಒಬ್ಬ ಅಭ್ಯರ್ಥಿ ಮಾತ್ರ ಸ್ಪರ್ಧೆ ಎಂಬ ಮಾತು ಕೇಳಿ ಜಿಲ್ಲೆಯ ಜನ ಕಾಫಿಗೆ ಹೆಚ್ಚು ಸಕ್ಕರೆ ಹಾಕಿಕೊಂಡು ಕುಡಿದು ಸಂತಸ ಪಡುತ್ತಿದ್ದಾರಂತೆ.
ನಮ್ಮ ಮತ ಎಂದಿಗೂ ರವಿ ಅವರಿಗೆ ಎಂದು ಜಿಲ್ಲೆಯ ಕೇಸರಿ ಪಡೆಯ ಕೆಲವು ನಾಯಕರು ಈಗಾಗಲೇ ಶಪಥ ಮಾಡಿದ್ದಾರೆ. ಎಲ್ಲಾ ಪಕ್ಷಗಳ ಸಂಯುಕ್ತ ರಂಗ ಸೂಕ್ತ ಅಭ್ಯರ್ಥಿಗಳನ್ನು ಹುಡುಕುವುದನ್ನು ನೋಡಿ ಜಿಲ್ಲೆಯ ಜನರು ರವಿ ಎದುರಾಳಿ ಯಾರು ಎಂಬ ಕುತೂಹಲದಲ್ಲಿ ಮುಳುಗಿದ್ದಾರೆ.
ತನ್ನ ವಿರುದ್ಧ ವಿವಿಧ ಪಕ್ಷಗಳು ಷಡ್ಯಂತ್ರ ರೂಪಿಸುತ್ತಿರುವುದು ತಿಳಿದ ರವಿಯವರು ಹಾಗೆಯೇ ಗಡ್ಡದಡಿಯಲ್ಲಿ ನೆಗೆ ಚೆಲ್ಲಿ, ಯಾರು ಬೇಕಾದರೂ ಎದುರಾಳಿಯಾಗಿ ನಿಲ್ಲಲಿ, ಅವರ ವಿರುದ್ಧ ಸೋತರೆ ಗಡ್ಡ ಬೋಳಿಸುತ್ತೇನೆ ಎಂದು ಪ್ರಮಾಣ ಮಾಡಿದ್ದಾರೆ ಎಂದು ಚಿಕ್ಕಮಗಳೂರಿನ ಚಿಕ್ಕಮಕ್ಕಳು ಹೇಳಿಕೊಂಡು ತಿರುಗಾಡುತ್ತಿದ್ದಾರಂತೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications