ಸಂಕಲ್ಪ ವಿಘ್ನ: ಬಿಜೆಪಿಗೆ ಟಾಂಗ್ ಕೊಟ್ರಪ್ಪಾ ಈಶ್ವರಪ್ಪ

ಈ ಮಧ್ಯೆ, ಚುನಾವಣೆ ಕಾಲದಲ್ಲಿ ಪಕ್ಷದಲ್ಲಿ ಭಿನ್ನಮತಕ್ಕೆ ಕಿಚ್ಚು ಹಚ್ಚಿರುವ ಈಶ್ವರಪ್ಪ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಪ್ರಹ್ಲಾದ್ ಜೋಶಿ ಅವರು ಬೆಳಗ್ಗೆ 10.45ಕ್ಕೆ ಅಧಿಕಾರ ಸ್ವೀಕರಿಸಲಿದ್ದು, ಇನ್ನೂ ಅಧ್ಯಕ್ಷರಾಗಿಯೇ ಇರುವ ಈಶ್ವರಪ್ಪನವರು ಪಕ್ಷದ ಬಾವುಟವನ್ನು ಸಾಂಕೇತಿಕವಾಗಿ ಜೋಷಿಗೆ ಹಸ್ತಾಂತರಿಸುತ್ತಾರಾ? ಇಂದು ನಡೆಯುವ ಪಕ್ಷದ ಚುನಾವಣಾ ಸಮಿತಿಯಲ್ಲಿ ಪಾಲ್ಗೊಳ್ಳುತ್ತಾರಾ? ಎಂಬ ಯಕ್ಷ ಪ್ರಶ್ನೆಗಳು ಎದುರಾಗಿವೆ.
ಆದರೆ ಬಲ್ಲ ಮೂಲಗಳ ಪ್ರಕಾರ ಸಾಹೇಬರು ಆಗಲೇ ಶಿವಮೊಗ್ಗದಲ್ಲಿ ತಮ್ಮ ಮನೆ ತಲುಪಿಕೊಂಡಿದ್ದು, ಬಾಗಿಲು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಒಲ್ಲದ ಮನಸ್ಸಿನಿಂದಲೇ ದಿಢೀರನೆ ಪಕ್ಷದ ಅಧ್ಯಕ್ಷ ಸ್ಥಾನ ತೊರೆದಿದ್ದ ಈಶ್ವರಪ್ಪನವರು ನಿನ್ನೆ ಏಕಾಏಕಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅನಂತು ಮೇಲೆ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿರುವ ಪಕ್ಷಕ್ಕೆ ಇದು ಶುಭ ಸೂಚಕವಲ್ಲ ಎಂದು ಕಾರ್ಯಕರ್ತರು ನಿರಾಶೆಗೊಂಡಿದ್ದಾರೆ.
ಮೈಸೂರಿನಲ್ಲಿ ವಿಜಯ ಸಂಕಲ್ಪ ವಿಘ್ನಗೊಂಡಿದ್ದು ಹೀಗೆ:
ವಿಧಾನ ಸಭಾ ಚುನಾವಣೆ ಘೋಷಣೆಯಾಗುತ್ತಿರುವಂತೆಯೇ ತಮ್ಮ ಐದು ವರ್ಷಗಳ 'ಅಮೋಘ ಸಾಧನೆ'ಯನ್ನು ಜನತೆಯ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಸಂಕಲ್ಪ ತೊಟ್ಟ ಆಡಳಿತಾರೂಢ ಬಿಜೆಪಿ ಮಲ್ಲಿಗೆ ನಗರಿಯಲ್ಲಿ ನಿನ್ನೆ ಜಾಗೃತಿ ಸಮಾವೇಶ ನಡೆಸಿತು.
ಪಕ್ಷದ ಅತಿರಥ ಮಹಾರಥರಾದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ನೂತನ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್ ಮತ್ತಿತರರು ಭಾಗವಹಿಸಿ, ಶಕ್ತಿ ಪ್ರದರ್ಶನ ಮಾಡಿದರು. ಅದರಲ್ಲಿ ನಿರ್ಗಮಿತ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪನವರೂ ಪಾಲ್ಗೊಂಡಿದ್ದರು. ಸಮಾವೇಶ ಬೂದಿ ಮುಚ್ಚಿದ ಕೆಂಡದಂತೆ ನಡೆದಿದೆ. ಆದರೆ ಅದಕ್ಕೂ ಮುನ್ನ ... ಏನು ನಡೆಯಿತು ಎಂಬುದೇ interesting.
ಶೆಟ್ಟರ್, ಈಶ್ವರಪ್ಪ, ಸದಾನಂದ ಗೌಡ, ಜೋಶಿ ಮತ್ತು ಅನಂತ್ ಎಂಬ ಪಾಂಡವರು ಉಪಹಾರಕ್ಕೆಂದು ಪ್ರೆಸಿಡೆಂಟ್ ಹೋಟೆಲ್‌ಗೆ ತೆರಳಿದ್ದಾರೆ. Over a cup of coffee any thing can happen ಎನ್ನುವಂತೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತಿಗಿಳಿಸಿದ್ದಾರೆ. ಆದರೆ ಕಾಫಿ ಕಹಿಯಾಗಿದೆ. ಆ ಸಂದರ್ಭದಲ್ಲೇ ಅನಂತ ಕುಮಾರ್ ಮತ್ತು ಈಶ್ವರಪ್ಪ ಮಧ್ಯೆ ತೀವ್ರ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.
ಆದರೆ ಇದೇ ಪಾಂಡವಪುತ್ರರು ಅಂತಾದ್ದೇನೂ ಆಗೇ ಇಲ್ಲ. ನಾವೆಲ್ಲಾ ಒಂದು ಎಂದು ಮತ್ತೆ ಸಂಕಲ್ಪ ತೊಟ್ಟಿದ್ದಾರೆ.












Click it and Unblock the Notifications