ಚುನಾವಣೆ ದಿನ ಘೋಷಣೆ: ಎಲ್ಲಿದ್ದೀರಾ ಎಸ್ಸೆಂ ಕೃಷ್ಣ?

ಕಾಂಗ್ರೆಸ್ ಹೈ ಕಮಾಂಡ್ ನಿಂದ ಕೃಷ್ಣ ಅವರಿಗೆ ಕರೆ ಬಂದಿದ್ದು ಸೂಕ್ತ ಸಮಯವಾಗಿದ್ದು, ಕರ್ನಾಟಕದಲ್ಲಿ ಚುನಾವಣೆ ಸಿದ್ಧತೆ ಇನ್ಮುಂದೆ ಗರಿಗೆದರುವ ಸೂಚನೆ ಸಿಕ್ಕಿದೆ. ಕಾಂಗ್ರೆಸ್ಸಿನಿಂದ ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಲು ಸಾಧ್ಯವಾಗಿಲ್ಲ. ಚುನಾವಣಾ ಸಮಿತಿಯಲ್ಲಿ ಸಾರಥಿಯ ಆಯ್ಕೆ ಬಗ್ಗೆ ಒಮ್ಮತ ಮೂಡಿಲ್ಲ.
224 ವಿಧಾನಸಭಾ ಕ್ಷೇತ್ರ ಅಭ್ಯರ್ಥಿಗಳ ಆಯ್ಕೆ ಗೊಂದಲದಲ್ಲೇ ಸಮಿತಿ ಇದೆ. ಒಂದೊಂದು ಕ್ಷೇತ್ರಕ್ಕೆ ಮೂರು ಮೂರು ಅಭ್ಯರ್ಥಿಗಳನ್ನು ಸೂಚಿಸಿ ಪಟ್ಟಿಯನ್ನು ಹೈಕಮಾಂಡ್ ಗೆ ಕಳಿಸಿದ್ದಾರೆ.
ಸೋನಿಯಾ ಜೊತೆ ಮಹತ್ವದ ಭೇಟಿ: ಕಾಂಗ್ರೆಸ್ ನ ನಂ.2 ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕರ್ನಾಟಕಕ್ಕೆ ಕರೆ ತಂದು ಮತದಾರರನ್ನು ಸೆಳೆಯಲು ರಾಜ್ಯ ಕಾಂಗ್ರೆಸ್ ಚಿಂತಿಸಿದೆ. ಆದರೆ, ಇತ್ತೀಚೆಗೆ ಕಾಂಗ್ರೆಸ್ ನ ಪ್ರಮುಖ ಸಭೆಗಳಿಂದ ದೂರ ಹೋಗುತ್ತಿರುವ ಹಿರಿಯ ನಾಯಕ ಎಸ್ಸೆಂ ಕೃಷ್ಣ ಅವರನ್ನು ಮತ್ತೊಮ್ಮೆ ರಾಜ್ಯ ರಾಜಕಾರಣದತ್ತ ಆಸಕ್ತಿ ಮೂಡುವಂತೆ ಮಾಡಲು ಸೋನಿಯಾಜಿ ಯತ್ನಿಸುತ್ತಿದ್ದಾರೆ.
ಚಿಂತನ್ ಶಿಬಿರ, ಚುನಾವಣಾ ಸಮಿತಿಯಲ್ಲೂ ಕೃಷ್ಣ ಕಾಣಿಸಿಕೊಳ್ಳಲಿಲ್ಲ. ಅಲ್ಲದೆ ಧರಂ ಸಿಂಗ್(ಮೈಸೂರು), ಬಿ ಜನಾರ್ಧನ ಪೂಜಾರಿ(ಬೆಂಗಳೂರು), ಬಿಕೆ ಹರಿಪ್ರಸಾದ್ (ಗುಲ್ಬರ್ಗಾ) ಹಾಗೂ ಎಸ್ ಆರ್ ಪಾಟೀಲ್ (ಬೆಳಗಾವಿ) ಅವರ ಕೈಲಿಗೆ ಅಭ್ಯರ್ಥಿಗಳ ಪಟ್ಟಿ ಫಿಲ್ಟರ್ ಮಾಡುವ ಕೆಲಸ ಸಿಕ್ಕಿತ್ತು. ಆದರೆ, ಕೃಷ್ಣ ಎಲ್ಲೂ ಕಾಣಿಸಲಿಲ್ಲ.
ಎಸ್ಸೆಂ ಕೃಷ್ಣ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡುವಂತೆ ಒಕ್ಕಲಿಗ ಸಮುದಾಯದಿಂದ ಬಲವಾದ ಒತ್ತಡ ಬಂದಿದೆ. ಜಾತಿವಾರು ಲೆಕ್ಕಾಚಾರದಲ್ಲಿ ಮೂರನೇ ಸ್ಥಾನದಲ್ಲಿರುವ ಒಕ್ಕಲಿಗ ಸಮುದಾಯದ ಮತ ನಂಬಿಕೊಂಡು ಕೃಷ್ಣ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲು ಕಾಂಗ್ರೆಸ್ ಸದ್ಯಕ್ಕೆ ಸಿದ್ಧವಿಲ್ಲ.
ಕೃಷ್ಣ ಅವರನ್ನು ಚುನಾವಣೆ ಸಾರಥಿಯಾಗಿ ಘೋಷಿಸಲು ಕೂಡಾ ಕಾಂಗ್ರೆಸ್ ಹಿಂದೇಟು ಹಾಕಿರುವುದರಿಂದ ಕೃಷ್ಣ ಅವರು ರಾಜಕೀಯ ಸನ್ಯಾಸದತ್ತ ಮುಖ ಮಾಡುವ ಅಪಾಯ ಕೂಡಾ ಎದುರಾಗಿದೆ.












Click it and Unblock the Notifications