ಟ್ರೈನಿನಲ್ಲಿ ಬಲಾತ್ಕಾರ: ಮಾಜಿ ಸಂಸದನ ಬಂಧನ

ಆರೋಪಿಯನ್ನು ಚಂದ್ರನಾಥ್ ಸಿಂಗ್ ಎಂದು ಗುರುತಿಸಲಾಗಿದ್ದು, ಮಚಲೀಷಹರದ ಈ ಮಾಜಿ ಸಂಸದ ಸಮಾಜವಾದಿ ಪಕ್ಷದವ. ಇದರಿಂದ ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಎಂಬ ಅಪ್ಪ-ಮಕ್ಕಳ ಎಸ್ಪಿ ಪಕ್ಷ ಮತ್ತೆ ಮುಜುಗುರಕ್ಕೊಳಗಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪರಾಮರ್ಶಿಸಲು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಭೆ ಕರೆದಿದ್ದ ದಿನದಂದೆ ಈ ಘಟನೆ ನಡೆದಿದೆ. ಆಡಳಿತಾರೂಢ ಸಮಾಜವಾದಿ ಪಕ್ಷಕ್ಕೆ ಸೇರಿದ ಜನಪ್ರತಿನಿಧಿಗಳೇ ಹೆಚ್ಚಾಗಿ ಅಪರಾಧ ಪ್ರಕರಣಗಳಲ್ಲಿ ತೊಡಗಿರುವುದು ವ್ಯಾಪಕವಾಗಿ ಕಂಡುಬರುತ್ತಿದೆ.
ಪದ್ಮಾವತ್ ಎಕ್ಸ್ ಪ್ರೆಸ್ ಟ್ರೈನಿನಲ್ಲಿ ಈ ಬಲಾತ್ಕಾರ ಪ್ರಕರಣ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಸಂಸದ ಚಂದ್ರನಾಥ್, ಷಾಹಜಹಾನ್ ಪುರ ಬಳಿ ಜತೆಯಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ರೈಲ್ವೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಸಹ ಪ್ರಯಾಣಿಕರು ಯುವತಿಯ ಆರೋಪವನ್ನು ದೃಢೀಕರಿಸಿದ್ದು, ಸಂಸದ ಚಂದ್ರನಾಥಗೆ ಕಂಟಕ ತಂದೊಡ್ಡಿದೆ. ಆರೋಪವನ್ನು ನಿರಾಕರಿಸಿರುವ ಸಂಸದ, 'ನಾನು ನನ್ನ ಬರ್ತ್ ನಲ್ಲಿ ಕುಳಿತುಕೊಳ್ಳಬೇಕಿತ್ತು. ಹಾಗಾಗಿ, ಇನ್ನು ಸ್ವಲ್ಪ ಆ ಕಡೆಗೆ ಜರುಗು ಎಂದು ಹುಡುಗಿಗೆ ಸೂಚಿಸಿದೆ. ಅಷ್ಟಕ್ಕೇ ಇಷ್ಟೆಲ್ಲಾ ಕಥೆ ಕಟ್ಟಿದ್ದಾರೆ' ಎಂದು ಗೋಳಾಡಿದ್ದಾರೆ.
ಪೊಲೀಸರು ಸಂಸದನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಷಾಹಜಹಾನಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕುಡಿದ ಮತ್ತಿನಲ್ಲಿ ಸಂಸದ ಚಂದ್ರನಾಥ ನಡೆಯಲೂ ಆಗದಷ್ಟು ನಿತ್ರಾಣಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications