ವಲಸಿಗರ ಸೇರ್ಪಡೆಗೆ ರಾಹುಲ್ ಗಾಂಧಿ ತಡೆ

ನವದೆಹಲಿ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರದ ಸಚಿವರು ಮತ್ತು ರಾಜ್ಯದ ಸಂಸದರ ಜೊತೆ ರಾಹುಲ್ ಗಾಂಧಿ ಅವರನ್ನು ಬುಧವಾರ ರಾತ್ರಿ ಭೇಟಿ ಮಾಡಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ನಡೆದ ಸಭೆಯಲ್ಲಿ ವಲಸಿಗರ ಸೇರ್ಪಡೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.
ಕೇಂದ್ರ ಸಚಿವರಾದ ವೀರಪ್ಪ ಮೋಯ್ಲಿ, ಮಲ್ಲಿಕಾರ್ಜುನ ಖರ್ಗೆ ವಲಸಿಗರ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರಿಂದ ಸಭೆಯಲ್ಲಿ ಒಮ್ಮತ ಮೂಡದ ಕಾರಣ ರಾಹುಲ್ ಗಾಂಧಿ ವಲಸಿಗರ ಸೇರ್ಪಡೆ ಗಡುವನ್ನು ಮುಂದೂಡಿ ಎಂದು ಪರಮೇಶ್ವರ್ ಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟು 18 ಶಾಸಕರು ಕಾಂಗ್ರೆಸ್ ಸೇರುವ ಉತ್ಸಾಹದಲ್ಲಿದ್ದು ಸಿ.ಪಿ.ಯೋಗೀಶ್ವರ್ ಕೈ' ಹಿಡಿದಿದ್ದಾರೆ. ಸಚಿವರಾದ ಆನಂದ್ ಆಸ್ನೋಟಿಕರ್, ವಿ.ಸೋವಣ್ಣ, ಶಾಸಕ ರಾಜೂಗೌಡ, ಪಕ್ಷೇತರ ಅಭ್ಯರ್ಥಿ ಡಿ.ಸುಧಾಕರ್ ಮುಂತಾದವರು ಕಾಂಗ್ರೆಸ್ ಸೇರುವ ಪಟ್ಟಿಯಲ್ಲಿದ್ದಾರೆ.
ಆದರೆ, ರಾಜ್ಯದ ಮೂಲ ಕಾಂಗ್ರೆಸಿಗರು ಈಗಾಗಲೇ ವಲಸಿಗರ ಸೇರ್ಪಡೆ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರೀ ವಲಸಿಗರ ಸೇರ್ಪಡೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೆ ಹಿಂದಿರುಗಿದ್ದರು.
ಬುಧವಾರ ದೆಹಲಿಯಲ್ಲಿ ಸ್ಥಳೀಯ ಸಂಸ್ಥೆಗಳ ಗೆಲುವಿನ ಕುರಿತು ನಡೆದ ಸಭೆಯಲ್ಲಿಯೂ ಮಿಸ್ತ್ರೀ ವಲಸಿಗರ ಸೇರ್ಪಡೆ ಬಗ್ಗೆ ರಾಹುಲ್ ಗಾಂಧಿ ನಿರ್ಣಯ ಕೈಗೊಳ್ಳುತ್ತಾರೆ ತಮ್ಮ ಜವಾಬ್ದಾರಿಯಿಂದ ವಿಮುಖರಾಗಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಸಭೆಯಲ್ಲಿಯೂ ಕೇಂದ್ರ ಸಚಿವರ ವಿರೋಧದಿಂದಾಗಿ ವಲಸಿಗರಿಗೆ ಸಿಹಿ ಸುದ್ದಿ ದೊರಕಿಲ್ಲ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳಿಸಿರುವುದರಿಂದ, ಸಹಜವಾಗಿಯೇ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿಯೂ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿದೆ. ಮೊದಲೇ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ವಲಸಿಗರಿಗೂ ಮಣೆ ಹಾಕಿದರೆ ಅಸಮಾಧಾನ ಹೆಚ್ಚಾಗುತ್ತದೆ ಎಂಬ ಭೀತಿಯಲ್ಲಿ ಕಾಂಗ್ರೆಸ್ ನಾಯಕರು ಜಾಣ್ಮೆಯ ನಿರ್ಧಾರಗಳಿಗೆ ಶರಣಾಗಿದ್ದಾರೆ.
ನಮಸ್ಕಾರ ಮತ್ತ ಬನ್ನಿ : ರಾಹುಲ್ ಗಾಂಧಿ ಸಭೆಯ ಬಳಿಕ ಮಾ.21ರಂದು ಮತ್ತೊಮ್ಮೆ ದೆಹಲಿಗೆ ಸಿದ್ಧರಾಮಯ್ಯ ಅವರೊಂದಿಗೆ ಬನ್ನಿ ಎಂದು ಪರಮೇಶ್ವರ್ ಗೆ ಸೂಚಿಸಿದ್ದಾರೆ. ಸಿದ್ಧರಾಮಯ್ಯ ಮತ್ತು ಪರಮೇಶ್ವರ್ ಜೊತೆ ಚರ್ಚಿಸಿ ರಾಹುಲ್ ಗಾಂಧಿ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಅಲ್ಲಿಯ ವರೆಗೆ ವಲಸಿಗರ ಭವಿಷ್ಯ ಅತಂತ್ರವಾಗಿಯೇ ಮುಂದುವರೆಯುವ ಸಾಧ್ಯತೆಗಳಿವೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications