ಲಂಚ: ಶೆಟ್ಟರ ವಿರುದ್ಧ ಯಡಿಯೂರಪ್ಪ ಗಂಭೀರ ಆರೋಪ
ಬೆಂಗಳೂರು, ಮಾ.14: ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಸೋತು ಸುಣ್ಣವಾಗಿರುವ (ಆದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ) ಆಡಳಿತಾರೂಢ ಬಿಜೆಪಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ 300 ಕೋಟಿ ರೂ ಲಂಚ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿರುವ ಬೆನ್ನಲ್ಲೇ ಮತ್ತೊಬ್ಬ ಹಿರಿಯ ನಾಯಕರು ಆಳಿಗೊಂದು ಕಲ್ಲು ಎಂಬಂತೆ ಶೆಟ್ಟರ್ ಅವರತ್ತ ಎಸೆದಿದ್ದಾರೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿನ ಮರಳನ್ನು ಗೋವಾ ಮತ್ತು ಲಕ್ಷ ದ್ವೀಪಗಳಿಗೆ ಸಾಗಣೆ ಮಾಡಲು ಅನುಮತಿ ಕೊಡುವ ಮೂಲಕ ಮುಖ್ಯಮಂತ್ರಿ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಮರಳು ಮಾಫಿಯಾದಿಂದ ಭಾರಿ ಪ್ರಮಾಣದ ಕಿಕ್ ಬ್ಯಾಕ್ ಪಡೆದಿದೆ ಎಂದು ಕೆಜೆಪಿ ಅಧ್ಯಕ್ಷರೂ ಆದ ಬಿಎಸ್ ಯಡಿಯೂರಪ್ಪ ಗಂಭೀರ ಆಪಾದನೆ ಮಾಡಿದ್ದಾರೆ.

ಉಲ್ಟಾ ಚೋರ್ ... : ಇದರಲ್ಲಿ ಎಷ್ಟು ಸತ್ಯಾಂಶವಿದೆಯೋ ಖುದ್ದು ಶೆಟ್ಟರ್ ಅವರೇ ಹೇಳಬೇಕು. ಆದರೆ ಇಲ್ಲೊಂದು ಸ್ವಾರಸ್ಯಕರ ಸಂಗತಿಯಿದೆ. ಹೆಚ್ಚಿನ ಮಾಹಿತಿಗಾಗಿ cm shettar gets kick back alleges bs yeddyurappa ಅಂತ ಗೂಗಲ್ ಜಾಲತಾಣದಲ್ಲಿ ಸರ್ಚ್ ಮಾಡಿದರೆ ಗೂಗಲ್ ಸಹ ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಬದಲಿಗೆ ಯಡಿಯೂರಪ್ಪನವರ ಜಾತಕವನ್ನು ಲಾಲಾಡುವ ಗೂಗಲ್ ಅವರ ಅಷ್ಟೂ ಹಗರಣಗಳ ಸಮಗ್ರ ಮಾಹಿತಿ ನೀಡುತ್ತದೆ ಜಾಣ ಗೂಗಲ್.
ಚುನಾವಣೆ ಉದ್ದೇಶದಿಂದ ಶೆಟ್ಟರು ಕೊಳ್ಳೆ ಹೊಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಅಧಿಕಾರದ ಕೊನೆ ಘಳಿಗೆಯಲ್ಲಿ ಮುಖ್ಯಮಂತ್ರಿ ಶೆಟ್ಟರ್ ಅವರು ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಾಕಿ ಉಳಿದಿರುವ ನೂರಾರು ಕಡತಗಳನ್ನು ಶೀಘ್ರ ವಿಲೇವಾರಿ ಮಾಡುತ್ತಿದ್ದಾರೆ. ಭಾರಿ ಲಂಚ ಪಡೆದೇ ಕಡತಯಜ್ಞದಲ್ಲಿ ತೊಡಗಿದ್ದಾರೆ ಎಂದು ಬಿಎಸ್ವೈ ಗುಡುಗಿದ್ದಾರೆ.
ಸರ್ಕಾರ ವಿವಿಧ ಯೋಜನೆಗಳ ಮೂಲಕ ಭ್ರಷ್ಟಾಚಾರ ಎಸಗುತ್ತಿದೆ ಎಂಬ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪ ಇದಕ್ಕೆ ಪುಷ್ಠಿ ನೀಡುತ್ತದೆ ಎಂದ ಯಡಿಯೂರಪ್ಪ, ತಾವಿನ್ನೆಂದೂ ಬಿಜೆಪಿಗೆ ಮರಳುವುದಿಲ್ಲ ಎಂದು ನೋರೆಂಟನೇ ಬಾರಿಗೆ ಇದೇ ಸಂದರ್ಭದಲ್ಲಿ ಪುನರುಚ್ಛರಿಸಿದರು.
ಮರಳು ಸಾಗಣೆ ಅನುಮತಿಯ ನಿರ್ಧಾರವನ್ನು ಸಿಎಂ ಶೆಟ್ಟರ್ ತಕ್ಷಣವೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕೆಜೆಪಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಕಾನೂನು ಹೋರಾಟವನ್ನೂ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications