3 ದಿನ ಡಾ. ರಾಜ್ ಉತ್ಸವ, ಪ್ರತಿಮೆ ಅನಾವರಣ
ಬೆಂಗಳೂರು, ಮಾ.13: ಚಾಲುಕ್ಯ ಡಾ.ರಾಜ್‌ಕುಮಾರ್ ಪ್ರತಿಮೆ ಪ್ರತಿಷ್ಠಾಪನಾ ವೇದಿಕೆ ಇದರ ವತಿಯಿಂದ ಜೆಸಿ ನಗರದಲ್ಲಿ ಮಾರ್ಚ್ 15ರಂದು ಡಾ.ರಾಜ್ ಕುಮಾರ್ ಅವರ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದೆ. ಮಹಾನಗರ ಪಾಲಿಕೆಯ ಸದಸ್ಯರಾದ ಎಂ.ನಾಗರಾಜ್ ಗೌರವಾಧ್ಯಕ್ಷತೆಯಲ್ಲಿ ಈ ಪ್ರತಿಮೆ ಸಿದ್ಧಗೊಂಡಿದ್ದು ಮೂರು ದಿನಗಳ ಕಾಲ ಡಾ. ರಾಜ್ ಉತ್ಸವ ಹಮ್ಮಿಕೊಳ್ಳಲಾಗಿದೆ.
ಡಾ.ರಾಜ್ 4 ದಶಕಗಳ ಕಾಲ ಕನ್ನಡದ ಸಾಂಸ್ಕೃತಿಕ ನಾಯಕನಾಗಿ ನಾಡಿಗೆ ಸಲ್ಲಿಸಿದ ಸೇವೆ ಮತ್ತು ಭಾರತೀಯ ಚಿತ್ರರಂಗಕ್ಕೆ 100ವರ್ಷ ತುಂಬಿರುವ ಕಾರಣಕ್ಕಾಗಿ ಈ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಹಂಪಿಯ ರಥದ ಮಾದರಿಯಲ್ಲಿ ಕಡೆದಿರುವ ಶಿಲಾರಥದ ಮೇಲೆ ಮಯೂರವರ್ಮನ ವೇಷಧಾರಿಯಾಗಿ ನಿಂತ ಡಾ, ರಾಜ್‌ರ 12 ಅಡಿ ಎತ್ತರದ 1 ಟನ್ ತೂಕದ ಕಂಚಿನ ಪ್ರತಿಮೆ 12 ಲಕ್ಷ ರೂ., ಕಲ್ಲಿನ ರಥಕ್ಕೆ 27ಲಕ್ಷ ರೂ ವ್ಯಯಿಸಲಾಗಿದೆ ಎಂದರು.

ಒಟ್ಟಾರೆ ಸುಮಾರು 67 ಲಕ್ಷ ರು ಖರ್ಚಿನಲ್ಲಿ ತಯಾರಾಗಿರುವ ಈ ಭವ್ಯ ಪ್ರತಿಮೆಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನರಸಿಂಹಾಚಾರ್ ಮತ್ತು ಮಕ್ಕಳು ಕಲ್ಲಿನ ರಥವನ್ನು ಸಿದ್ಧಪಡಿಸಿದ್ದು, ಶಿಲ್ಪಿ ಶಿವಕುಮಾರ್ ಮಯೂರವರ್ಮ ವೇಷಧಾರಿ ರಾಜ್ ಪ್ರತಿಮೆಯನ್ನು ಕಡೆದಿದ್ದಾರೆ
ಕಾರ್ಯಕ್ರಮ ವಿವರ: ಮಾ. 15ರಂದು ಹಿರಿಯ ಸಾಹಿತಿ ಡಾ.ಕೋ.ಚನ್ನಬಸಪ್ಪ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಆರ್.ಅಶೋಕ್, ಎಸ್.ಸುರೇಶ್ ಕುಮಾರ್, ಸಂಸದ ಚೆಲುವ ನಾರಾಯಣ ಸ್ವಾಮಿ ಜ್ಯೋತಿ ಬೆಳಗಿಸಲಿದ್ದಾರೆ. ಪ್ರಧಾನ ಭಾಷಣಕಾರರಾಗಿ ಪ್ರೊ.ಬರಗೂರು ರಾಮಚಂದ್ರಪ್ಪ ಭಾವಹಿಸುತ್ತಿದ್ದಾರೆ.
* ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ವೆಂಕಟೇಶ ಮೂರ್ತಿ ವಹಿಸಲಿದ್ದಾರೆ. ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಧ್ವಜಾರೋಹಣ ಮಾಡಲಿದ್ದಾರೆ. ವೇದಿಕೆಯ ಗೌರವಾಧ್ಯಕ್ಷ ಎಂ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವರಾಜ್‌ಕುಮಾರ್ ಭಾಗಹಿಸಲಿದ್ದಾರೆ
ಪುಸ್ತಕ ಬಿಡುಗಡೆ: ನಿರ್ದೇಶಕ ಎಸ್.ನಾರಾಯಣ್ ಸಂಪಾದಿತ ‘ಮುತ್ತು' ಕೃತಿಯನ್ನು ‘ಈ ಸಂಜೆ' ಪತ್ರಿಕೆಯ ಟಿ ವೆಂಕಟೇಶ್ ಲೋಕಾರ್ಪಣೆ ಮಾಡಲಿದ್ದಾರೆ. ಸಂಜೆ 6-30 ಕ್ಕೆ ಮಾಜಿ ಮಂತ್ರಿ ಡಿ.ಕೆ.ಶಿವಕುಮಾರ್ ಜ್ಯೋತಿ ಬೆಳಗಿಸಲಿದ್ದು, ಸಚಿವ ವಿ.ಸೋಮಣ್ಣ ಮುಖ್ಯಅತಿಥಿಯಾಗಿ ಆಗಮಿಸಲಿದ್ದಾರೆ
* ಮಾ.16ರಂದು ನಡೆಯುವ ಕಾರ್ಯಕ್ರಮವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ರಚಿಸಿರುವ ‘ನಟಸಾರ್ವಭೌಮ' ಕೃತಿಯನ್ನು ರೆಬಲ್‌ಸ್ಟಾರ್ ಅಂಬರೀಶ್ ಲೋಕಾರ್ಪಣೆ ಮಾಡಲಿದ್ದಾರೆ.
* ಪುಸ್ತಕದ ಕುರಿತು ಪ್ರೊ.ಕೆ.ವೈ. ನಾರಾಯಣ್ ಸ್ವಾಮಿ ಮಾತನಾಡಲಿದ್ದಾರೆ. ಸಂಗೀತ ನಿರ್ದೇಶಕ ಹಂಸಲೇಖ, ಬೆಂಗಳೂರು ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಶ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ನಾಗರಾಜ್ ತಿಳಿಸಿದರು.
* ಮಾ.17ರಂದು ನಡೆಯುವ ಕಾರ್ಯಕ್ರಮವನ್ನು ನಟ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಲಿದ್ದಾರೆ. ನಟ ರವಿಚಂದ್ರನ್ ಜ್ಯೋತಿ ಬೆಳಗಿಸಲಿದ್ದು, ಅಂದು ಸಂಜೆ 6-30ಕ್ಕೆ ಹಿನ್ನೆಲೆ ಗಾಯಕ ಗುರುಕಿರಣ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ












Click it and Unblock the Notifications