ಜೆಡಿಎಸ್ಸಿಗೆ ಸೋತ ಕೆಎಚ್ ಮುನಿಯಪ್ಪಗೆ ಜಿಕೆಟಗರಿ ಕಾಟ

ಜುಲೈ 22, 2002ರಲ್ಲಿಯೇ, ತಮ್ಮ ಪತ್ನಿಯ ಹೆಸರಿನಲ್ಲಿ ನಿವೇಶನ ಹೊಂದಿರುವ ಸತ್ಯ ಸಂಗತಿಯನ್ನು ಮರೆಮಾಚಿ, ಬೆಂಗಳೂರಿನ prime location ನಲ್ಲಿ 60X80 ಅಡಿ ವಿಸ್ತೀರ್ಣದ ಎರಡು ದುಬಾರಿ ಜಿ ಕೆಟಗರಿ ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿರುವ ಆರೋಪ ಸಚಿವ ಕೆಎಚ್ ಮುನಿಯಪ್ಪ ವಿರುದ್ಧ ಬಲವಾಗಿ ಕೇಳಿಬಂದಿದೆ. ಪ್ರಸ್ತುತ ಆ ನಿವೇಶನಗಳ ಮಾರುಕಟ್ಟೆ ಮೌಲ್ಯ ಎರಡು ಕೋಟಿ ರೂ. ಆಗಿದೆ.
ಇಂತಿಪ್ಪ ಸಚಿವ ಮುನಿಯಪ್ಪ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಕೋಲಾರದ ವಕೀಲ ಡಿವಿ ಚಂದ್ರಶೇಖರ ರೆಡ್ಡಿ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಿ ಕೆಟಗರಿ ನಿವೇಶನ ಹಂಚಿಕೆ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ನ್ಯಾ ಬಿ ಪದ್ಮರಾಜ್ ಆಯೋಗ ಕಾರ್ಯನಿರ್ವಹಿಸುತ್ತಿದೆ. ಸದರಿ ದೂರನ್ನು ಆ ಆಯೋಗಕ್ಕೆ ಸಲ್ಲಿಸುವಂತೆ ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿಎಚ್ ವಘೇಲಾ ಮತ್ತು ನ್ಯಾ ಬಿವಿ ನಾಗರತ್ನ ಅವರ ವಿಭಾಗೀಯ ಪೀಠವು ಅರ್ಜಿದಾರನಿಗೆ ಸೂಚಿಸಿದೆ.
2002ರಲ್ಲಿ ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ... ಬನಶಂಕರಿ ಎರಡನೇ ಹಂತದಲ್ಲಿ ಕತ್ರಿಗುಪ್ಪೆಯಲ್ಲಿ ಸಂಖ್ಯೆ 566 ಮತ್ತು 567 ಈ ಎರಡೂ ಜಿ ಕೆಟಗರಿ ನಿವೇಶನಗಳನ್ನು ಸಚಿವ ಮುನಿಯಪ್ಪಗೆ ಬಿಡಿಎ ಮಂಜೂರು ಮಾಡಿತ್ತು. ಈ ಸರಕಾರಿ ನಿವೇಶನಗಳನ್ನು ಪಡೆಯುವುದಕ್ಕಾಗಿ ಸಂಜಯನಗರ ಮತ್ತು ದೊಮ್ಮಸಂದ್ರದಲ್ಲಿ ತಮ್ಮ ಪತ್ನಿ ನಾಗರತ್ನಮ್ಮ ಹೆಸರಿನಲ್ಲಿ ನಿವೇಶನ ಹೊಂದಿದ್ದ ಸಂಗತಿಯನ್ನು ಮುಚ್ಚಿಟ್ಟ ಮುನಿಯಪ್ಪ, ನಗರದಲ್ಲಿ ತಮಗೆ ಯಾವುದೇ ನಿವೇಶನವಿಲ್ಲ ಎಂದು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದರು.
ಅಲ್ಲದೇ, ಆಗ 2002ರಲ್ಲಿ ನಿವೇಶನದ ಮೊತ್ತ 25 ಲಕ್ಷ ರೂ ಆಗಿತ್ತು. ಆದರೆ, ಬಿಡಿಎ ಕೇವಲ 7.51 ಲಕ್ಷ ರೂ. ಗೆ ಮಂಜೂರು ಮಾಡಿದೆ. ಅಲ್ಲದೇ ಕಾಲಾಂತರದಲ್ಲಿ ಆ ವಸತಿ ನಿವೇಶನದಲ್ಲಿ ಮುನಿಯಪ್ಪ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದ ಅರ್ಜಿದಾರರು, ಮುನಿಯಪ್ಪ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications