ರಾಜ್ಯಾಧ್ಯಕ್ಷನಾಗುವ ಆಸೆಯಿದೆ, ಆದ್ರೆ ಈಗಲ್ಲ
ಚಿಕ್ಕಮಗಳೂರು, ಮಾ.12: ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ನೋಡಿಕೊಂಡು ಬಿಜೆಪಿಗೆ ಹೊಸ ಸಾರಥಿಯನ್ನು ಘೋಷಿಸಲು ಬಿಜೆಪಿ ಹಿರಿಯ ನಾಯಕರು ನಿರ್ಧರಿಸಿದ್ದರು. ಈಗ ಬಿಜೆಪಿ ಸ್ಥಿತಿ ಗತಿ ನೋಡಿದರೆ ರಾಜ್ಯಾಧ್ಯಕ್ಷ ಪಟ್ಟಕ್ಕೇರಲು ಯಾರು ಏಕೆ ತಯಾರಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ರಾಜ್ಯಾಧ್ಯಕ್ಷ ಹುದ್ದೆ ನನಗೆ ಬೇಡ, ನನಗೆ ಬೇಡ ಎಂದು ಎಲ್ಲಾ ನಾಯಕರು ಹೇಳಿದ್ದು ಏಕೆ ಎಂಬುದು ಜನಕ್ಕೆ ಈಗ ಅರ್ಥವಾಗುತ್ತಿದೆ. ಸೋಲಿನ ಸುಳಿವು ಸಿಕ್ಕೋ ಏನೋ ಕೆಎಸ್ ಈಶ್ವರಪ್ಪ ಅವರು ಮೊದಲೇ ರಾಜೀನಾಮೆ ಎಸೆದು ಸಂಪೂರ್ಣ ಹೊಣೆಗಾರಿಕೆ ಹೊರುವುದರಿಂದ ಬಚಾವ್ ಆದರು.
ಪರಿಸ್ಥಿತಿ ಹೀಗಿದ್ದರೂ ಬಿಜೆಪಿ ನಾಯಕರು ಹೊಸ ನಾಯಕನ ಆಯ್ಕೆ ವಿಳಂಬ ಮಾಡುವ ಇಲ್ಲ ಎನ್ನಲಾಗಿದೆ. ಉಳಿದಿರುವ ಹೆಸರುಗಳಲ್ಲಿ ಡಿವಿ ಸದಾನಂದ ಗೌಡ, ಆರ್ ಅಶೋಕ್ ಹಾಗೂ ಸಿ.ಟಿ ರವಿ ಹೆಸರು ಇತ್ತಂತೆ. ಆದರೆ, ಮೂವರಲ್ಲಿ ಸಿ.ಟಿ ರವಿ ನಗರಸಭೆ ಚುನಾವಣೆ ಫಲಿತಾಂಶದ ನಂತರ ಸುದ್ದಿಗೋಷ್ಠಿ ನಡೆಸಿ ನಾನು ಸದ್ಯಕ್ಕೆ ರಾಜ್ಯಾಧ್ಯಕ್ಷ ಸ್ಥಾನಕ್ಕೇರಲಾರೆ ಎಂದಿದ್ದಾರೆ. ಸಿಟಿ ರವಿ ಖಾರವಾದ ಪ್ರತಿಕ್ರಿಯೆ, ಚಿಕ್ಕಮಗಳೂರಿನಲ್ಲಿ ಬಿಜೆಪಿ ರಿಪೋರ್ಟ್ ಕಾರ್ಡ್ ರವಿ ಭವಿಷ್ಯಕ್ಕೆ ಹೇಗೆ ಪೂರಕ ಎಂಬುದು ನಿಮ್ಮ ಮುಂದೆ

ನನಗೂ ಆಸೆಯಿದೆ
ಪಕ್ಷದ ರಾಜ್ಯಾಧ್ಯಕ್ಷರಾಗುವ ಆಸೆ ಇರುವುದು ನಿಜ. ಸಚಿವನಾಗಬೇಕು ಎಂದು ಕೊಂಡಿದೆ. ಪಕ್ಷದ ನಾಯಕರ ಅಣತಿಯಂತೆ ಸಚಿವನಾಗಿದ್ದೇನೆ. ಇದೇ ರೀತಿ ಮುಂದೊಂದು ದಿನ ಪಕ್ಷದ ಅಧ್ಯಕ್ಷನಾಗುವೆ ಎಂದು ಉನ್ನ ಶಿಕ್ಷಣ ಸಚಿವ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.

ವ್ಯಕ್ತಿಪ್ರತಿಷ್ಠೆ ಕಾರಣ
ಬಿಜೆಪಿಯನ್ನು ಅನೇಕ ನಾಯಕರು ತೊರೆಯಲು ವ್ಯಕ್ತಿಪ್ರತಿಷ್ಠೆ ಕಾರಣ ಎಂಬುದನ್ನು ಒಪ್ಪಿಕೊಂಡ ರವಿ, ಬಿಜೆಪಿಯಿಂದ ಹೊರ ಹೋದ ನಾಯಕರು ಮತ್ತೊಮ್ಮೆ ಕೈ ಜೋಡಿಸಿದರೆ ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ಉತ್ತಮ ಆಡಳಿತ ಸಾಧ್ಯ ಎಂದರು. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ಜನರ ಆಶೋತ್ತರಕ್ಕೆ ತಕ್ಕಂತೆ ನಾನು ಕುಣಿಯಬೇಕು ಅಷ್ಟೆ: ಸಿಟಿ ರವಿ

ಮುಂದಿದೆ ಕಠಿಣ ಸವಾಲು
ನಗರ ಸಭೆ ಚುನಾವಣೆ ಸೆಮಿಫೈನಲ್, ವಿಧಾನಸಭೆ ಚುನಾವಣೆ ಫೈನಲ್ ಎಂಬ ಮಾತಿಗೆ ಈಗಲೂ ಬದ್ಧವಾಗಿದ್ದೇನೆ. ನಗರಸಭೆಗಳಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಹೊರ ಹಾಕಿದೆ. ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ಪ್ರಚಾರದ ಕೊರತೆ ಇತ್ತು ಎಂಬುದನ್ನು ಒಪ್ಪಲೇಬೇಕಾಗುತ್ತದೆ

ಆಂತರಿಕ ಕಲಹವೇ ಸೋಲಿಗೆ ಕಾರಣ
ಜನರಿಗೆ ಒಳ್ಳೆ ಊಟ ಹಾಕಿದ್ದು ನಮ್ಮ ಕೆಲಸ. ಅದು ಈ ಹಿಂದಿನ ಮುಖ್ಯಮಂತ್ರಿಗಳಿಂದಲೂ ಆಗಿದೆ. ಒಳ್ಳೆ ಊಟ ತಿಂದ ಮೇಲೆ ಜನ ಊಟದ ಬಗ್ಗೆ ಬಿಟ್ಟು ಅಪ್ಪ ಅಮ್ಮನ ಜಗಳದ ಬಗ್ಗೆ ಮಾತನಾಡುತ್ತಾರೆ ಎಂದರೆ. ಸಮಸ್ಯೆ ಎಲ್ಲಿದೆ ಎಂಬುದನ್ನು ಗುರುತಿಸಬೇಕು. ಬಿಜೆಪಿ ತೊರೆದವರು, ಹಾಲಿ ಒಳ್ಳೆ ಹುದ್ದೆಯಲ್ಲಿರುವವರು ಪ್ರತಿಷ್ಠೆ ಬಿಟ್ಟರೆ ಮುಂದೆ ಪಕ್ಷ ಉತ್ತಮ ಫಲಿತಾಂಶ ಹೊರ ಹಾಕಲಿದೆ.

ಚಿಕ್ಕಮಗಳೂರು ಜಿಲ್ಲೆ ರಿಪೋರ್ಟ್ ಕಾರ್ಡ್
ಜಿಲ್ಲೆಯಲ್ಲಿ ಬಿಜೆಪಿಗೆ ಮಿಶ್ರಫಲ ಸಿಕ್ಕಿದೆ. ಸಿಎಂಸಿ ಉಳಿಸಿಕೊಂಡು, ಮಲೆನಾಡು ಭಾಗದಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆಯಂತೆ ಕಂಡಿದೆ. ಬಯಲು ಸೀಮೆ ಟಿಎಂಸಿಗಳಲ್ಲಿ ನೆಲ ಕಚ್ಚಿದೆ. ಒಟ್ಟಾರೆ 148 ಸೀಟುಗಳಲ್ಲಿ 53 ಬಿಜೆಪಿ, 57 ಕಾಂಗ್ರೆಸ್, 14 ಜೆಡಿಎಸ್ ಪಾಲಾಗಿದ್ದರೆ, 19 ಜನ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಕೆಜೆಪಿ ತನ್ನ ಖಾತೆ ತೆರೆದಿದೆ.

ಗೆಲುವು ರವಿಗೆ ಅಭಯವಾಗಿದೆ
* ಚಿಕ್ಕಮಗಳೂರು ಸಿಎಂಸಿಯಲ್ಲಿ 35 ರಲ್ಲಿ 18 ಬಿಜೆಪಿ, 10 ಕಾಂಗ್ರೆಸ್, 2 ಜೆಡಿಎಸ್, 5 ಪಕ್ಷೇತರರು
* ಕಡೂರು (ಟಿಎಂಸಿ)ಯಲ್ಲಿ 23 ಸೀಟುಗಳಲ್ಲಿ ಬಿಜೆಪಿ ಕೇವಲ 1, 13 ಕಾಂಗ್ರೆಸ್, 5 ಜೆಡಿಎಸ್, 2 ಕೆಜೆಪಿ, 2 ಪಕ್ಷೇತರರು
* ಬೀರೂರು (ಟಿಎಂಸಿ) 23 ಸೀಟುಗಳಲ್ಲಿ 8 ಬಿಜೆಪಿ, 11 ಕಾಂಗ್ರೆಸ್, 2 ಜೆಡಿಎಸ್, 1 ಕೆಜೆಪಿ, 1 ಪಕ್ಷೇತರರು
* ಮೂಡಿಗೆರೆ (ಟಿಪಿ) 11 ರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 5 ಸೀಟು, 1 ಪಕ್ಷೇತರರ ಪಾಲು
* ನರಸಿಂಹರಾಜಪುರ(ಟಿಪಿ) 11 ರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 4 ಸೀಟು, 2 ಜೆಡಿಎಸ್, 1 ಪಕ್ಷೇತರ
* ಕೊಪ್ಪ (ಟಿಪಿ) 11 ರಲ್ಲಿ 6 ಬಿಜೆಪಿ, 4 ಕಾಂಗ್ರೆಸ್, 1 ಜೆಡಿಎಸ್
* ಶೃಂಗೇರಿ (ಟಿಪಿ) 11 ರಲ್ಲಿ 11 ಬಿಜೆಪಿ ಪಾಲು
* ತರೀಕೆರೆಯಲ್ಲಿ 23 ರಲ್ಲಿ ಬಿಜೆಪಿ ಶೂನ್ಯ ಸಂಪಾದನೆ, 10 ಕಾಂಗ್ರೆಸ್ 9 ಪಕ್ಷೇತರರು, 2 ಕೆಜೆಪಿ, 2 ಜೆಡಿಎಸ್ ಪಾಲು












Click it and Unblock the Notifications