ರಾಜಕೀಯ ನಿವೃತ್ತಿ ಪಡೆಯುತ್ತೇನೆ : ರೇಣುಕಾಚಾರ್ಯ

ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ್ದ ಕೆಜೆಪಿ ಮುಖಂಡ ಧನಂಜಯ್ ಕುಮಾರ್ ಬಿಜೆಪಿ ಸರ್ಕಾರ ಭಷ್ಟಾಚಾರದಲ್ಲಿ ಮುಳುಗಿದೆ. ಅಬಕಾರಿ ಸಚಿವ ರೇಣುಕಾಚಾರ್ಯ ವೈನ್ ಸ್ಟೋರ್ ಗಳನ್ನು ಸ್ನಾಕ್ ಬಾರ್ ಗಳಾಗಿ ಪರಿವರ್ತಿಸಲು ಅನುಮತಿ ನೀಡಲು 250 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ಧನಂಜಯ್ ಕುಮಾರ್ ಈ ಆರೋಪಕ್ಕೆ ತಿರುಗೇಟು ನೀಡಿರುವ ರೇಣುಕಾಚಾರ್ಯ, ಸಿಎಲ್-2 ವೈನ್ ಶಾಪ್ ಗಳನ್ನು ಸ್ನಾಕ್ ಬಾರ್ ಆಗಿ ಪರಿವರ್ತನೆ ಮಾಡುವಂತೆ ಮದ್ಯ ಮಾರಾಟಗಾರರ ಸಂಘ ಇಲಾಖೆಗೆ ಮನವಿ ಸಲ್ಲಿಸಿದೆ.
ಈ ಬಗ್ಗೆ ಅಧಿಕಾರಗಳ ಹಂತದಲ್ಲಿ ಸಮಲೋಚನೆ ನಡೆಯುತ್ತಿದೆ, ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆದ್ದರಿಂದ ಅವ್ಯವಹಾರ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಸಾರಾಯಿ ನಿಷೇಧದ ನಂತರ 7 ಸಾವಿರ ಅಂಗಡಿಗಳನ್ನು ಮುಚ್ಚಿದ್ದೇವೆ.
ಯಾವುದೇ ಹೊಸ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುತ್ತಿಲ್ಲ. ಮಾತನಾಡುವ ಚಟವಿರುವ ಧನಂಜಯ್ ಕುಮಾರ್ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ದಾಖಲೆ ಸಮೇತ ಸಾಬೀತು ಮಾಡಿದಲ್ಲಿ ಹತ್ತು ನಿಮಿಷದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ.
ಆರೋಪ ಸಾಬೀತಾಗದಿದ್ದರೆ ಧನಂಜಯ್ ಕುಮಾರ್ ನಿವೃತ್ತಿ ಪಡೆಯಬೇಕು ಎಂದು ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ಕೆಜೆಪಿ ಮತ್ತು ಬಿಜೆಪಿ ನಾಯಕರ ಕೆಸರೆರಚಾಟ ಬಹಿರಂಗವಾಗಿ ನಡೆಯುತ್ತಿದ್ದು, ವಿಧಾನಸಭೆ ಚುನಾವಣೆ ಹತ್ತಿರವಾದಂತೆ ಪರಸ್ಪರ ಆರೋಪಗಳು ಹೆಚ್ಚಾಗಲಿವೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications