ಎಲ್ ಪಿಜಿ ಬೆಲೆ ಇಳಿಕೆ, ಡೀಸೆಲ್ ಬೆಲೆ ಏರಿಕೆ

ಆದರೆ, ಪೆಟ್ರೋಲ್ ಬಂಕ್ ಗಳಲ್ಲಿ ಸಿಗೋ ಡೀಸೆಲ್ ಹಾಗೂ ಸಬ್ಸಿಡಿ ದರದಲ್ಲಿ ಸಿಗುವ ಸಿಲಿಂದರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಪೆಟ್ರೋಲಿಯಂ ಇಲಾಖೆ ಸ್ಪಷ್ಟಪಡಿಸಿದೆ. ಸಬ್ಸಿಡಿಯೇತರ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಪ್ರತಿ ಸಿಲಿಂಡರ್‌ಗೆ 37.50 ರೂ.ಗಳಷ್ಟು ಕಡಿತ ಮಾಡುವ ಮೂಲಕ ಶ್ರೀಸಾಮಾನ್ಯನಿಗೆ ತುಸು ಸಮಾಧಾನ ನೀಡಲಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ತೈಲ ಕಂಪೆನಿಗಳು ಸೇನೆ, ರೈಲ್ವೆ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮಗಳಂತಹ ಬೃಹತ್ ಪ್ರಮಾಣದ ಗ್ರಾಹಕರಿಗೆ ಡೀಸೆಲ್‌ನ್ನು ಪ್ರತಿ ಲೀಟರ್‌ಗೆ 58.58 ರೂ.ಗೆ ಮಾರಾಟ ಮಾಡಲಿವೆ.
ಆದರೆ, ದೆಹಲಿಯ ಪೆಟ್ರೋಲ್ ಪಂಪ್‌ಗಳಲ್ಲಿ ಡೀಸೆಲ್ ಪ್ರತಿ ಲೀಟರ್‌ಗೆ 48.16 ರೂ.ಗೆ ಮಾರಾಟವಾಗುತ್ತಿದೆ. ವಾಸ್ತವವಾಗಿ ತೈಲ ಕಂಪೆನಿಗಳು ಶುಕ್ರವಾರದಂದು ಬೃಹತ್ ಪ್ರಮಾಣದ ಗ್ರಾಹಕರಿಗೆ ಡೀಸೆಲ್ ಮಾರಾಟ ಬೆಲೆಯಲ್ಲಿ 94 ಪೈಸೆಯಷ್ಟು ಏರಿಕೆ ಮಾಡಿತ್ತು. ಆದರೆ ವ್ಯಾಟ್ ಹಾಗೂ ಮಾರಾಟ ತೆರಿಗೆಗಳನ್ನು ಸೇರಿಸಿದಲ್ಲಿ ಡೀಸೆಲ್ ದರದಲ್ಲಿ 1.25 ರೂ. ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ದರದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಹೆಚ್ಚಳ ಅನಿವಾರ್ಯವಾಗಿದೆಯೆಂದು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ತಿಳಿಸಿವೆ. ಈ ನಡುವೆ ವರ್ಷಕ್ಕೆ ಸಬ್ಸಿಡಿ ದರದಲ್ಲಿ ನೀಡಲಾಗುವ 9 ಎಲ್‌ಪಿಜಿ ಸಿಲಿಂಡರ್‌ಗಳ ಬಳಿಕ ಗ್ರಾಹಕರು ಖರೀದಿಸುವ ಪ್ರತಿ ಸಿಲಿಂಡರ್‌ನ ದರದಲ್ಲಿ 37.50 ರೂ.ನಷ್ಟು ಕಡಿತ ಮಾಡಿರುವುದು ಜನ ಸಾಮಾನ್ಯರಿಗೆ ನೆಮ್ಮದಿ ತಂದಿದೆ.
ಈ ಮೊದಲು 942 ರೂ.ಗಳಷ್ಟಿದ್ದ ಪ್ರತಿ 14.2 ಕೆ.ಜಿ. ಸಬ್ಸಿಡಿಯೇತರ ಎಲ್‌ಪಿಜಿ ಸಿಲಿಂಡರ್‌ನ ದರ ಇದೀಗ 904.50 ರೂ.ಗೆ ಇಳಿದಿದೆ. ಶುಕ್ರವಾರ ತೈಲ ಕಂಪೆನಿಗಳು ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 1.40 ರೂ.ನಷ್ಟು ಏರಿಕೆ ಮಾಡಿದ್ದವು. ಫೆಬ್ರವರಿ 16ರಂದು ಪೆಟ್ರೋಲ್ ದರದಲ್ಲಿ 1.50 ರೂ. ಏರಿಕೆ ಮಾಡಲಾಗಿತ್ತು. ಹೀಗಾಗಿ ಕೇವಲ ಎರಡು ವಾರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಒಟ್ಟು 3 ರೂ.ನಷ್ಟು ಏರಿಕೆಯಾದಂತಾಗಿದೆ.












Click it and Unblock the Notifications