'ಸ್ಪಷ್ಟ, ನಿಖರ, ಪ್ರಖರ ತೆಂಗು' ಬೇಕೆಂದ ಕೆಜೆಪಿ!
ಬೆಂಗಳೂರು, ಮಾ.2: ಓಹೋ, ತಮ್ಮ ಪಕ್ಷಕ್ಕೆ 'ಒಂದು ಸಂಪೂರ್ಣ ತೆಂಗಿನಕಾಯಿ ಮತ್ತು ಅದಕ್ಕೆ ಅಂಟಿಕೊಂಡಂತೆ ತೆಂಗಿನಕಾಯಿಯ ಅರ್ಧ ಹೋಳು' ಚಿತ್ರವು ಚುನಾವಣೆ ಚಿಹ್ನೆಯಾಗಿ ಪ್ರಾಪ್ತಿಯಾಗಿದೆ. ಜತೆಗೆ ಯಡಿಯೂರಪ್ಪ ಅವರೇ ಪಕ್ಷದ ಅಧ್ಯಕ್ಷರು ಎಂದು ಚುನಾವಣೆ ಆಯೋಗ ಅನುಮೋದಿಸಿದೆ ಎಂದು ಇತ್ತೀಚೆಗಷ್ಟೇ ಸಂಭ್ರಮಿಸಿದ್ದ ಕರ್ನಾಟಕ ಜನತಾ ಪಕ್ಷ ಇದೀಗ ನಿರಾಶೆಯ ಮಡುವಿಗೆ ಜಾರಿದೆ.
ತೆಂಗು ಚಿಹ್ನೆಯ ಬಗ್ಗೆ ಅಪಸ್ವರ ಕೇಳಿಬಂದಿರುವುದೇ ಇದಕ್ಕೆ ಕಾರಣವಾಗಿದೆ. ಅದೇನೋ ಅರ್ಧ ತೆಂಗಿನ ಹೋಳಿನ ಪಕ್ಕದಲ್ಲಿರುವ ಪೂರ್ಣ ತೆಂಗಿನಕಾಯಿಯು ಕಪ್ಪೆಯ ಮಾದರಿ ಕಾಣುತ್ತಿದೆಯಂತೆ. ಅದಕ್ಕೆ ಎಲ್ಲರೂ 'ಕಪ್ಪೆ ಜತೆಗೆ ಚಿಪ್ಪು' ಎಂದು ನಗೆಯಾಡುತ್ತಾ ಲೇವಡಿ ಮಾಡುತ್ತಿದ್ದಾರಂತೆ.

ಇದು ಪಕ್ಷದ ನಾಯಕರಿಗೆ ಮುಜಗುರವನ್ನುಂಟುಮಾಡಿದೆ. ಖುದ್ದು ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣೂರು ಧನಂಜಯ ಕುಮಾರ್ ಗೆ ಇದು ಹಿಡಿಸಿಲ್ಲವಂತೆ. 'ಅದೆಂಥಾದ್ದುರಿ! ಹಾರುವ ಕಪ್ಪೆ ಥರ ಕಾಣುತ್ತಿದೆ ಆ ತೆಂಗಿನ ಕಾಯಿ. ಅದೂ ಚುನಾವಣೆ ಚಿಹ್ನೆಯನ್ನು ಕಪ್ಪು ಬಿಳುಪಿನ ಬಣ್ಣದಲ್ಲಿ ಬಳಸಬೇಕಾಗುತ್ತದೆ. ಆಗ ಆ ಪೂರ್ತಿ ತೆಂಗಿನಕಾಯಿ ಡಿಟ್ಟೋ ಕಪ್ಪೆ ಮಾದರಿ ಇರುತ್ತದೆ. ಅದರ ಜತೆಗೆ ಈ ಚಿಪ್ಪು ಬೇರೆ. ಯಾರಿಗೆ ಬೇಕೂರೀ ಈ ಚಿಹ್ನೆ?' ಎಂದು ಸನ್ಮಾನ್ಯ ಧನಂಜಯ ಕುಮಾರ್ ಸ್ವತಃ ನಗೆಯಾಡಿದ್ದಾರೆ.
ಸ್ಪಷ್ಟ, ನಿಖರ, ಪ್ರಖರ ತೆಂಗು: ಅದಕ್ಕೇ, ಹೇಗೂ ಈಗ ಕೇಂದ್ರ ಚುನಾವಣಾ ಆಯೋಗ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದೆ. ಸೀದಾ ಸಿಇಸಿ ಸಂಪತ್ ಅವರ ಬಳಿ ಹೋಗಿ 'ಸ್ವಾಮಿ ನಮಗೆ ಈ ಕಪ್ಪೆ ಮತ್ತು ಚಿಪ್ಪು ಸಹವಾಸವೇ ಬೇಡ. ಈಗಿರುವಂತೆ ತೆಂಗಿನಕಾಯಿ ಮತ್ತು ಪಕ್ಕದಲ್ಲಿ ಹೋಳು ಇರಲಿ. ಆದರೆ ಅದು ಸ್ಪಷ್ಟ, ನಿಖರ, ಪ್ರಖರವಾಗಿರಲಿ' ಎಂದು ಆಯೋಗಕ್ಕೆ ಅಲವತ್ತುಕೊಂಡಿದ್ದಾರೆ.
ಆದರೆ ಸ್ಥಳೀಯ ಚುನಾವಣೆ ವೇಳೆಗೆ ಆಯೋಗವೂ ಏನೂ ಮಾಡಲಾಗುವುದಿಲ್ಲ. ಕೆಜೆಪಿ ಇದೇ ಚಿಹ್ನೆಯಲ್ಲಿ ಚುನಾವಣೆಗೆ ಹೋಗಬೇಕು. ಆದಾಗ್ಯೂ ಮುಂದಿನ ಮಹತ್ವದ ವಿಧಾನಸಭೆ ಚುನಾವಣೆ ವೇಳೆಗಾದರೂ ಆಯೋಗವು ಚಿಹ್ನೆಯನ್ನು ಬದಲಾಯಿಸಿಕೊಡಬಹುದು.












Click it and Unblock the Notifications