ಉಡುಪಿಗೆ ಕಂಟಕ : ಶ್ರೀಕೃಷ್ಣ ಮಠದ ಸ್ಪಷ್ಟನೆ
ಉಡುಪಿ, ಫೆ 27: ಅಷ್ಟಮಂಗಲ ಪ್ರಶ್ನೆ ಮತ್ತು ಉಡುಪಿಗೆ ಆಗಬಹುದಾದ ಕಂಟಕದ ಬಗ್ಗೆ ಶ್ರೀಕೃಷ್ಣ ಮಠ ಸ್ಪಷ್ಟನೆ ನೀಡಿದೆ. ಮೇ 13 ರಂದು ಕ್ಷೇತ್ರಕ್ಕೆ ಯಾವುದೇ ಕಂಟಕವಿಲ್ಲ, ಭಕ್ತಾದಿಗಳು ಭಯ ಪಡುವ ಅಗತ್ಯವಿಲ್ಲ ಎಂದು ಮದನಂತೇಶ್ವರ ದೇವಾಲಯದ ಆಡಳಿತ ಅಧಿಕಾರಿ ವಿಷ್ಣು ಒನ್ಇಂಡಿಯಾಗೆ ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ದೇವಾಲಯದ ಆವರಣದಲ್ಲಿ ಅಷ್ಟಮಂಗಲ ಪ್ರಶ್ನೆ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು ಹೌದು. ಆದರೆ ಮೇ 13ರಂದು ಶುಕ್ರನು ತನ್ನ ಸಂಚಾರವನ್ನು ಬದಲಿಸುವ ದಿನವಾಗಿರುವುದರಿಂದ ಅಂದು ದೇವಾಲಯದ ಹಿರಿಯರೊಬ್ಬರಿಗೆ ತೊಂದರೆಯಾಗಬಹುದು ಎಂದು ಪ್ರಶ್ನೆಯ ವೇಳೆ ತೋರಿಬಂದಿದೆ ಎಂದು ವಿಷ್ಣು ಹೇಳಿದರು.

ಅಷ್ಟಮಂಗಲ ಪ್ರಶ್ನೆಯ ವೇಳೆ ದೇವಾಲಯದಲ್ಲಿ ಶುಚಿತ್ವದ ಬಗ್ಗೆ ಪ್ರಸ್ತಾಪ ಬಂದಿದ್ದು ನಿಜ, ಬರುವ ಭಕ್ತಾದಿಗಳು ಕ್ಷೇತ್ರದ ನೈರ್ಮಲ್ಯತೆ ಬಗ್ಗೆ ಉದಾಸೀನತೆ ತೋರುತ್ತಿರುವುದರಿಂದ ಹೀಗಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ನುಡಿದರು.
ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ತಾವು ತರುವ ವಿಗ್ರಹಗಳನ್ನು ಅಲ್ಲಲ್ಲಿ ತಂದಿಡುತ್ತಾರೆ. ಇರುವ ವಿಗ್ರಹಗಳಿಗೆಲ್ಲಾ ಪೂಜೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕ್ಷೇತ್ರದಲ್ಲಿ ಭಕ್ತಾದಿಗಳು ತಂದಿಟ್ಟ ವಿಗ್ರಹಗಳನ್ನು ವಾಪಸ್ ತೆಗೆದುಕೊಂಡು ಹೋಗಿ ತಮ್ಮ ತಮ್ಮ ಇಚ್ಛಾನುಸಾರ ಪೂಜೆ ಮಾಡಬೇಕೆಂದು ವಿಷ್ಣು ವಿನಂತಿಸಿಕೊಂಡರು.
ದೇವಾಲಯ ಮತ್ತು ಮಠಕ್ಕೆ ಸಂಬಂಧಪಟ್ಟ ವಿಗ್ರಹಗಳಿಗೆ ಶಾಸ್ತ್ರೋಕ್ತವಾಗಿ ಪೂಜೆಗಳು ನಡೆಯುತ್ತಿವೆ. ಮೇ 13ಕ್ಕೆ ಕ್ಷೇತ್ರಕ್ಕೆ ಯಾವುದೇ ಕಂಟಕವಿಲ್ಲ. ಇದೊಂದು ಅಪಪ್ರಚಾರದ ತಂತ್ರ ಎಂದು ಸಮಸ್ತ ಭಕ್ತಾದಿಗಳಲ್ಲಿ ಈ ಮೂಲಕ ವಿನಂತಿಸಿ ಕೊಳ್ಳುತ್ತಿದ್ದೇವೆ ಎಂದು ದೇವಾಲಯದ ಆಡಳಿತ ಅಧಿಕಾರಿ ವಿಷ್ಣು ಸ್ಪಷ್ಟನೆ ನೀಡಿದರು.












Click it and Unblock the Notifications