ವಿವಾದತ್ಮಕ ಹೇಳಿಕೆ - ವರುಣ್ ಗಾಂಧಿ ದೋಷಮುಕ್ತ

ಬುಧವಾರ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ಪಿಲಿಬಿಟ್ ಕೋರ್ಟ್, ಸಂಸದ ವರುಣ್ ಗಾಂಧಿ ವಿರುದ್ಧದ ಎರಡು ಪ್ರಕರಣನ್ನು ರದ್ದುಗೊಳಿಸಿ ಅವರನ್ನು ದೋಷಮುಕ್ತಗೊಳಿಸಿತು. ವರುಣ್ ಗಾಂಧಿ ವಿರುದ್ಧವಿದ್ದ 15 ಸಾಕ್ಷಿಗಳು ಅಗತ್ಯ ಸಾಕ್ಷ್ಯಾಧಾರ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ.
2009ರ ಮಾರ್ಚ್ 17 ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ವರುಣ್ ಗಾಂಧಿ "ಹಿಂದೂಗಳ ಮೇಲೆ ಕೈ ಎತ್ತಿದರೆ ಕೈ ಕಡಿಯುವುದಾಗಿ" ಹೇಳಿಕೆ ನೀಡಿದ್ದರು. ರಾಷ್ಟ್ರಾದ್ಯಂತ ವರುಣ್ ಗಾಂಧಿಯವರ ಹೇಳಿಕೆ ಭಾರೀ ಸಂಚಲನ ಮೂಡಿಸಿತ್ತು. ಅಲ್ಪ ಸಂಖ್ಯಾತರ ವಿರೋಧಕ್ಕೂ ಕಾರಣವಾಗಿತ್ತು.
ಇದರಿಂದಾಗಿ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವರುಣ್ ಗಾಂಧಿಯವರನ್ನು ಬಂಧಿಸಿ ಅವರ ಮೇಲೆ ಆರೋಪ ಪಟ್ಟಿ ಸಲ್ಲಿಸಿತ್ತು. 19 ದಿನಗಳ ಜೈಲುವಾಸದ ನಂತರ ವರುಣ್ ಗಾಂಧಿ ಬಿಡುಗಡೆಗೊಂಡಿದ್ದರು. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ವರುಣ್ ಗಾಂಧಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂ ಸೂಚನೆಯಂತೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ. ಪ್ರಚೋದನಾಕಾರಿ ಹೇಳಿಕೆ ನೀಡುವುದಿಲ್ಲ ಎಂದು 2009ರ ಏಪ್ರಿಲ್ 15ರಂದು ಇಟಾ ನಗರದ ಜಿಲ್ಲಾ ನ್ಯಾಯಮೂರ್ತಿ ಗೌರವ್ ದಯಾಳ್ ಅವರಿಗೆ ವರುಣ್ ಗಾಂಧಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದರು.












Click it and Unblock the Notifications